2010ರಲ್ಲಿ ಸಂಭವಿಸಿದ ಮಂಗಳೂರು ವಿಮಾನ ದುರಂತದ ಹಿನ್ನೆಲೆಯಲ್ಲಿ, ತುರ್ತು ಪರಿಸ್ಥಿತಿಯಲ್ಲಿ ವಿವಿಧ ಇಲಾಖೆಗಳ ಸಿದ್ಧತೆ ಹಾಗೂ ಸಮನ್ವಯವನ್ನು ಪರಿಶೀಲಿಸುವ ಉದ್ದೇಶದಿಂದ ಈ ಅಣಕು ಕಾರ್ಯಾಚರಣೆ ನಡೆಸಲಾಯಿತು.
117 ಪ್ರಯಾಣಿಕರು, 6 ಸಿಬ್ಬಂದಿ; ವಿಮಾನ ಪತನದ ಕಾಲ್ಪನಿಕ ಸನ್ನಿವೇಶ
ಮಂಗಳೂರಿನಿಂದ ಮುಂಬೈಗೆ ತೆರಳುತ್ತಿದ್ದ 'ಏರ್‌ಲೈನ್ XYZ' ಸಂಸ್ಥೆಯ 'ಫ್ಲೈಟ್ ನಂ. XYZ 123' ವಿಮಾನವು ಬೆಳಿಗ್ಗೆ 10:20ರ ಸುಮಾರಿಗೆ ವಿಮಾನ ನಿಲ್ದಾಣದ ಆವರಣದ ಹೊರಭಾಗದ ಸಮತಟ್ಟಾದ ಪ್ರದೇಶದಲ್ಲಿ ಪತನಗೊಂಡಿದೆ ಎಂಬ ಕಾಲ್ಪನಿಕ ಸನ್ನಿವೇಶವನ್ನು ಸೃಷ್ಟಿಸಲಾಗಿತ್ತು. ವಿಮಾನದಲ್ಲಿ 117 ಪ್ರಯಾಣಿಕರು ಹಾಗೂ ಆರು ಸಿಬ್ಬಂದಿ ಇದ್ದರು ಎಂದು ಸನ್ನಿವೇಶ ರೂಪಿಸಲಾಗಿತ್ತು.
ತಕ್ಷಣವೇ ವಿಮಾನ ನಿಲ್ದಾಣದ ರಕ್ಷಣಾ ಮತ್ತು ವೈದ್ಯಕೀಯ ತಂಡಗಳು, ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ವಿಮಾನವನ್ನು ಆವರಿಸಿದ್ದ ಬೆಂಕಿಯನ್ನು ನಂದಿಸುವುದರ ಜತೆಗೆ ಸಿಲುಕಿಕೊಂಡಿದ್ದ ಪ್ರಯಾಣಿಕರನ್ನು ರಕ್ಷಿಸುವ ಕಾರ್ಯ ನಡೆಸಲಾಯಿತು.
ಅಣಕು ಕಾರ್ಯಾಚರಣೆಯಲ್ಲಿ 9 ಮಂದಿ ಸಾವು!
ಅಣಕು ಕಾರ್ಯಾಚರಣೆಯ ಭಾಗವಾಗಿ ಒಟ್ಟು ಒಂಬತ್ತು ಮಂದಿ ಮೃತಪಟ್ಟ ಸನ್ನಿವೇಶವನ್ನು ಸೃಷ್ಟಿಸಲಾಗಿತ್ತು. ಇವರಲ್ಲಿ ಏಳು ಮಂದಿ ವಿಮಾನ ಪತನದಿಂದ ಮೃತಪಟ್ಟಿದ್ದರೆ, ಇನ್ನಿಬ್ಬರು ಅಪಘಾತದ ಸಂದರ್ಭದಲ್ಲಿ ಭಯಭೀತರಾಗಿ ಸಮೀಪದಲ್ಲೇ ಹರಿಯುವ ಗುರುಪುರ ನದಿಗೆ ಹಾರಿ ಮೃತಪಟ್ಟ ಸನ್ನಿವೇಶವನ್ನು ನಿರ್ವಹಿಸಲಾಯಿತು.
ಉಳಿದ ಗಾಯಾಳುಗಳನ್ನು ಗಾಯಗಳ ತೀವ್ರತೆಯ ಆಧಾರದ ಮೇಲೆ ವಿವಿಧ ವರ್ಗಗಳಾಗಿ ವಿಂಗಡಿಸಿ, ಸೂಕ್ತ ಚಿಕಿತ್ಸೆಗಾಗಿ ವ್ಯವಸ್ಥೆ ಮಾಡಲಾಯಿತು.
12 ಆಂಬ್ಯುಲೆನ್ಸ್‌ಗಳಲ್ಲಿ ಗಾಯಾಳುಗಳ ರವಾನೆ
ಗಂಭೀರ ಗಾಯಾಳುಗಳನ್ನು 'ಗ್ರೀನ್ ಕಾರಿಡಾರ್' ಮೂಲಕ 12 ಆಂಬ್ಯುಲೆನ್ಸ್‌ಗಳಲ್ಲಿ ಮಂಗಳೂರಿನ ಎ.ಜೆ. ಆಸ್ಪತ್ರೆ, ಫಾದರ್ ಮುಲ್ಲರ್ ಆಸ್ಪತ್ರೆ ಹಾಗೂ ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಯಿತು.
ಮೃತದೇಹಗಳ ನಿರ್ವಹಣೆಗಾಗಿ ಶ್ರೀದೇವಿ ಕಾಲೇಜಿನಲ್ಲಿ ತಾತ್ಕಾಲಿಕ ಶವಾಗಾರ ಹಾಗೂ ಗಾಯಾಳುಗಳಿಗಾಗಿ 'ಸರ್ವೈವಲ್ ರಿಲೀಫ್ ಸೆಂಟರ್' ವ್ಯವಸ್ಥೆ ಮಾಡಲಾಗಿತ್ತು.
ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನ ನಿಲ್ದಾಣದ ದೈನಂದಿನ ಕಾರ್ಯಾಚರಣೆಯನ್ನು ಒಂದು ಗಂಟೆ ಕಾಲ ಸ್ಥಗಿತಗೊಳಿಸಲಾಗಿತ್ತು. ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಬೆಳಿಗ್ಗೆ 11:20ರ ಸುಮಾರಿಗೆ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಪುನರಾರಂಭಿಸಲಾಯಿತು.
ವಿವಿಧ ಇಲಾಖೆಗಳ ಸಮನ್ವಯದ ಯಶಸ್ವಿ ತಾಲೀಮು
ಒಟ್ಟಿನಲ್ಲಿ, ವಿಮಾನ ಪತನದ ಸನ್ನಿವೇಶ ಸೃಷ್ಟಿಸುವುದರಿಂದ ಹಿಡಿದು ಬೆಂಕಿ ನಂದಿಸುವುದು, ಗಾಯಾಳುಗಳನ್ನು ರಕ್ಷಿಸುವುದು, ಮೃತದೇಹಗಳನ್ನು ಸ್ಥಳಾಂತರಿಸುವುದು ಹಾಗೂ ಆಸ್ಪತ್ರೆಗಳಿಗೆ ಗಾಯಾಳುಗಳನ್ನು ರವಾನಿಸುವವರೆಗಿನ ಪ್ರತಿಯೊಂದು ಹಂತವೂ ನೈಜ ವಿಮಾನ ದುರಂತವನ್ನೇ ನೆನಪಿಸುವಂತಿತ್ತು.
ವಿವಿಧ ಇಲಾಖೆಗಳ ನಡುವಿನ ಸಮನ್ವಯ, ತುರ್ತು ಸ್ಪಂದನೆ ಹಾಗೂ ರಕ್ಷಣಾ ಕಾರ್ಯಾಚರಣೆಯ ಸಿದ್ಧತೆಯನ್ನು ಪರೀಕ್ಷಿಸುವ ನಿಟ್ಟಿನಲ್ಲಿ ಈ ಅಣಕು ಕಾರ್ಯಾಚರಣೆ ಮಹತ್ವ ಪಡೆದಿದೆ. ಭವಿಷ್ಯದಲ್ಲಿ ಇಂತಹ ಅನಾಹುತಗಳು ಸಂಭವಿಸಿದಲ್ಲಿ ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಎದುರಿಸಲು ಸಿದ್ಧರಾಗಿರುವ ಸಂದೇಶವನ್ನು ಈ ತಾಲೀಮು ಸಾರಿತು












