BREAKING
ದಕ್ಷಿಣ ಕನ್ನಡ

ಮಂಗಳೂರು: ಬೋಳೂರು–ಬೆಂಗ್ರೆ ಸೇತುವೆ ಕಾಮಗಾರಿ ವೇಳೆ ಭಾರೀ ಅವಘಡ; ಕ್ರೇನ್ ಸಹಿತ ಕಾಂಕ್ರೀಟ್ ಸ್ಲ್ಯಾಬ್ ಕುಸಿತ, ಬೋಟ್ ಜಖಂ ಸೇತುವೆ ಕಾಮಗಾರಿ ವೇಳೆ ಅವಘಡ – ಇಬ್ಬರು ಕಾರ್ಮಿಕರಿಗೆ ಗಾಯ, ಮೀನುಗಾರಿಕಾ ಬೋಟ್‌ಗೆ ಹಾನಿ.

ಮಂಗಳೂರು: ಬೋಳೂರು–ಬೆಂಗ್ರೆ ಸೇತುವೆ ನಿರ್ಮಾಣ ಕಾಮಗಾರಿ ವೇಳೆ ಭಾರೀ ಅವಘಡ ಸಂಭವಿಸಿದೆ. ಸೇತುವೆಗೆ ಕಾಂಕ್ರೀಟ್ ಸ್ಲ್ಯಾಬ್ ಅಳವಡಿಸುವ ಸಂದರ್ಭದಲ್ಲಿ ಕ್ರೇನ್ ಸಹಿತ ಬೃಹತ್ ಸ್ಲ್ಯಾಬ್ ಏಕಾಏಕಿ ಕುಸಿದು ಬಿದ್ದಿದ್ದು, ಸಮೀಪದಲ್ಲಿದ್ದ ಮೀನುಗಾರಿಕಾ ಬೋಟ್ ಜಖಂಗೊಂಡಿದೆ. ಘಟನೆಯಲ್ಲಿ ಕ್ರೇನ್‌ನಲ್ಲಿದ್ದ ಇಬ್ಬರು ಕಾರ್ಮಿಕರು ಗಾಯಗೊಂಡಿದ್ದಾರೆ.

ಬೋಳೂರಿನ ಮೀನುಗಾರಿಕಾ ದಕ್ಕೆಯಿಂದ ತಣ್ಣೀರುಬಾವಿ–ಬೆಂಗ್ರೆ ಪ್ರದೇಶವನ್ನು ಸಂಪರ್ಕಿಸುವ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಸೇತುವೆಯ ಪಿಲ್ಲರ್‌ಗೆ ಬೃಹತ್ ಕಾಂಕ್ರೀಟ್ ಸ್ಲ್ಯಾಬ್ ಅಳವಡಿಸುವ ಕಾರ್ಯ ನಡೆಯುತ್ತಿದ್ದಾಗ, ತಾಂತ್ರಿಕ ಕಾರಣದಿಂದ ಸ್ಲ್ಯಾಬ್ ಕ್ರೇನ್ ಸಹಿತ ಏಕಾಏಕಿ ಜಾರಿಬಿದ್ದಿದೆ ಎನ್ನಲಾಗಿದೆ.

ಘಟನೆಯ ತೀವ್ರತೆಗೆ ಸಮೀಪದಲ್ಲೇ ನಿಲ್ಲಿಸಲಾಗಿದ್ದ ಹರೀಶ್ ಎಂಬವರಿಗೆ ಸೇರಿದ ಮೀನುಗಾರಿಕಾ ಬೋಟ್ ಜಖಂಗೊಂಡಿದೆ. ಕ್ರೇನ್‌ನಲ್ಲಿದ್ದ ಇಬ್ಬರು ಕಾರ್ಮಿಕರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.

ಮುಗ್ರೋಡಿ ಕನ್‌ಸ್ಟ್ರಕ್ಷನ್ ಸಂಸ್ಥೆಯು ಸೇತುವೆ ನಿರ್ಮಾಣ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿದೆ. ಘಟನೆಯಿಂದ ಕಾಮಗಾರಿ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.



 

📢 ಡೇ ಕರ್ನಾಟಕ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!