ಮೃತರನ್ನು ಕೇರಳದ ಕಣ್ಣೂರು ಮೂಲದ, ಬೆಂಗಳೂರಿನ ಎಸ್ಬಿಐ ಬ್ಯಾಂಕ್ನಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಜಿತೇಂದ್ರ (41) ಎಂದು ಗುರುತಿಸಲಾಗಿದೆ.
ಶುಕ್ರವಾರ ರಾತ್ರಿ ಸುಮಾರು 9 ಗಂಟೆಗೆ ಗಾಂಧಿನಗರ ಸರ್ಕಾರಿ ಶಾಲೆಯ ಸಮೀಪ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಆಲ್ಟೋ ಕಾರಿಗೆ ಅತಿವೇಗವಾಗಿ ಬಂದ ಫಾರ್ಚುನರ್ ಕಾರು ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಆಲ್ಟೋ ಕಾರು ಮೇಲಕ್ಕೆ ಹಾರಿ ಕಾಂಪೌಂಡ್ ಗೋಡೆಯ ಬಳಿ ಬಿದ್ದಿದೆ. ನಿಯಂತ್ರಣ ತಪ್ಪಿದ ಫಾರ್ಚುನರ್ ಕಾರು ಮರ ಹಾಗೂ ಕಾಂಪೌಂಡ್ ಗೋಡೆಗೆ ಅಪ್ಪಳಿಸಿ ನಿಂತಿದೆ.
ಅಪಘಾತದಲ್ಲಿ ಆಲ್ಟೋ ಕಾರಿನಲ್ಲಿದ್ದ ಜಿತೇಂದ್ರ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಜಿತೇಂದ್ರ ಅವರು ಇಬ್ಬರು ಸ್ನೇಹಿತರೊಂದಿಗೆ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಂಗಳೂರಿಗೆ ಬಂದಿದ್ದರು. ಶುಕ್ರವಾರ ಸಂಜೆ ಉರ್ವಾದ ಕೊರಗಜ್ಜನ ಕಟ್ಟೆಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲು ತೆರಳಿದ್ದರು. ಈ ಸಂದರ್ಭದಲ್ಲಿ ಸ್ನೇಹಿತ ಶರತ್ ಅವರಿಗೆ ಸೇರಿದ ಆಲ್ಟೋ ಕಾರಿನಲ್ಲಿ ಜಿತೇಂದ್ರ ಕುಳಿತಿದ್ದರು. ಶರತ್ ಅವರು ಕಾರಿನಿಂದ ಇಳಿದು ಸಮೀಪದ ಮೊಬೈಲ್ ಅಂಗಡಿಗೆ ಚಾರ್ಜರ್ ಖರೀದಿಸಲು ತೆರಳಿದ್ದ ವೇಳೆ ಈ ದುರಂತ ಸಂಭವಿಸಿದೆ.
ಅಪಘಾತಕ್ಕೆ ಕಾರಣವಾದ ಫಾರ್ಚುನರ್ ಕಾರಿನ ಚಾಲಕನನ್ನು ಘಟನೆಯ ಬಳಿಕ ಯಾರೋ ಸ್ಥಳದಿಂದ ಕರೆದೊಯ್ದಿದ್ದಾರೆ ಎನ್ನಲಾಗಿದೆ. ಆದರೆ, ಅಪಘಾತದಲ್ಲಿ ಸಂಪೂರ್ಣ ಜಖಂಗೊಂಡಿರುವ ಫಾರ್ಚುನರ್ ಕಾರನ್ನು ಸ್ಥಳದಲ್ಲೇ ಬಿಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ, ಮದ್ಯಪಾನ ಮಾಡಿ ವಾಹನ ಚಲಾಯಿಸಿ ವ್ಯಕ್ತಿಯ ಸಾವಿಗೆ ಕಾರಣನಾದ ಚಾಲಕನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈ ಸಂಬಂಧ ಪಾಂಡೇಶ್ವರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
