ವಿಶೇಷ ಮಕ್ಕಳ ಪಾಲನೆ ಪೋಷಣೆ ಮಾಡುತ್ತಿರುವ ಪುತ್ತೂರಿನ ದಂಪತಿ-ಶಿಕ್ಷಣದ ಜೊತೆಗೆ ಕಂಪ್ಯೂಟರ್ ಜ್ಞಾನ ನೀಡುವ ವಿಶೇಷ ಪ್ರಯತ್ನ

ವಿಶೇಷ ಮಕ್ಕಳ ಪಾಲನೆ ಪೋಷಣೆ ಮಾಡುತ್ತಿರುವ ಪುತ್ತೂರಿನ ದಂಪತಿ-ಶಿಕ್ಷಣದ ಜೊತೆಗೆ ಕಂಪ್ಯೂಟರ್ ಜ್ಞಾನ ನೀಡುವ ವಿಶೇಷ ಪ್ರಯತ್ನ


ಮಾನಸಿಕ ಹಾಗೂ ದೈಹಿಕವಾಗಿ ಸರಿಯಿದ್ದ ತಮ್ಮವರನ್ನೆ ನೋಡಿಕೊಳ್ಳಲು ಜನ ಹಿಂದು-ಮುಂದು ನೋಡುವ ಕಾಲವಿದು. ಆದ್ರೆ ಇಲ್ಲಿ ಬುದ್ದಿಮಾಂದ್ಯ ಸಹೋದರನನ್ನು ಕಳೆದುಕೊಂಡ ಯುವಕನೋರ್ವ ತನ್ನ ಜೀವಿತಾವಧಿಯನ್ನು ವಿಶೇಷ ಮಕ್ಕಳ ಪಾಲನೆ-ಪೋಷಣೆಗಾಗಿ ಮುಡಿಪಾಗಿಟ್ಟಿದ್ದಾರೆ. ಮನೆ ಮಂದಿಯ ಜೊತೆಗೆ ಜನರ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಬುದ್ಧಿಮಾಂದ್ಯರಿಗೆ ಆಶ್ರಯ ನೀಡಿ ದೇವರೆನಿಸಿಕೊಂಡಿದ್ದಾರೆ.

ಹೌದು..ಸರಿ-ತಪ್ಪು ಎನ್ನುವುದನ್ನು ತಿಳಿಯದಾದ ಬುದ್ಧಿಮಾಂದ್ಯರನ್ನು ಸಮಾಜ ಹಾಗೂ ಸ್ವಂತ ಜನರೇ ತಾತ್ಸಾರ ಭಾವದಿಂದ ನೋಡುವುದು ಸಾಮಾನ್ಯ. ಇದೇ ರೀತಿಯ ಮಕ್ಕಳನ್ನು ನೋಡಲು ಸಾಧ್ಯವಿಲ್ಲದೆ, ವಿಶೇಷ ಮಕ್ಕಳನ್ನು ಬೀದಿಗೆ ತಳ್ಳುವ ಪ್ರಕ್ರಿಯೆಯೂ ಸಾಮಾನ್ಯವಾಗಿ ನಡೆಯುತ್ತಿರುತ್ತದೆ. ಆದ್ರೆ ಇಂಥಹ ಮಕ್ಕಳಿಗೆ ಜೀವನ ಶಿಕ್ಷಣವನ್ನು ನೀಡಿ, ಸಮಾಜದ ಮುಖ್ಯವಾಣಿಗೆ ತರುವ ಪ್ರಾಮಾಣಿಕ ಪ್ರಯತ್ನವೊಂದನ್ನು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಯುವಕನೋರ್ವ ಕಳೆದ ಐದು ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದಾರೆ. ಅಣ್ಣಪ್ಪ ಎನ್ನುವ ಈ ಯುವಕ ಬುದ್ಧಿಮಾಂದ್ಯ ಮಕ್ಕಳನ್ನು ಹಾಗೂ ಹಿರಿಯರನ್ನು ಸಾಕಿ-ಸಲಹುವ ಜವಾಬ್ದಾರಿಯನ್ನು ಹೊತ್ತು ದಿನದ ಇಪ್ಪತ್ತನಾಲ್ಕು ಗಂಟೆಯೂ ಈ ವಿಶೇಷ ಮಕ್ಕಳ ಜೊತೆಯಲ್ಲೇ ಕಳೆಯುತ್ತಿದ್ದಾರೆ.ಸದ್ಯಕ್ಕೆ 14 ವಿಶೇಷ ಮಕ್ಕಳನ್ನು ನೋಡಿಕೊಳ್ಳುತ್ತಿರುವ ಅಣ್ಣಪ್ಪರ ಸೇವೆಗೆ ಪತ್ನಿಯೂ ನೆರವಾಗುತ್ತಿದ್ದಾರೆ. ಬಾಡಿಗೆ ಮನೆಯೊಂದರಲ್ಲಿ ಈ ಮಕ್ಕಳನ್ನು ಸಲಹುತ್ತಿದ್ದ ಅಣ್ಣಪ್ಪರ ಸೇವೆಯನ್ನು ಪರಿಗಣಿಸಿ ಪುತ್ತೂರು ಶಾಸಕರು ಬೀರಮಲೆ ಗುಡ್ಡದಲ್ಲಿ ಮಕ್ಕಳನ್ನು ಸಾಕಲು ಬೇಕಾದ ವ್ಯವಸ್ಥೆಯನ್ನು ಮಾಡಿದ್ದಾರೆ. ತಮ್ಮ ಎರಡು ಮುದ್ದು ಮಕ್ಕಳ ಜೊತೆಗೆ ವಿಶೇಷ ಮಕ್ಕಳನ್ನೂ ಮಕ್ಕಳಂತೆ ಸಾಕುತ್ತಿರುವ ಅಣ್ಣಪ್ಪ ದಂಪತಿಗಳು ತಮ್ಮ ರಾತ್ರಿ ಹಗಲನ್ನು ಮಕ್ಕಳಿಗಾಗಿಯೇ ಮುಡಿಪಾಗಿಟ್ಟಿದ್ದಾರೆ.

 ವಿಶೇಷ ಮಕ್ಕಳಾದ ಕಾರಣ ಸುರಕ್ಷತೆ ದೃಷ್ಟಿಯಿಂದ ಉತ್ತಮ ತಡೆಬೇಲಿಯ ವ್ಯವಸ್ಥೆಗಾಗಿ ದಂಪತಿಗಳು ದಾನಿಗಳ ಸಹಕಾರ ಕೋರುತ್ತಿದ್ದಾರೆ. ಮಕ್ಕಳ ಆರೋಗ್ಯದಲ್ಲಿ ಯಾವ ಸಂದರ್ಭದಲ್ಲೂ ಏರುಪೇರಾಗುವ ಸಾಧ್ಯತೆಯಿದ್ದು, ಈ ಸಂದರ್ಭದಲ್ಲಿ ಮಕ್ಕಳನ್ನು ಆಸ್ಪತ್ರೆಗೆ ಸಾಗಿಸಲು ಒಂದು ವಾಹನದ ಅನಿವಾರ್ಯತೆಯಲ್ಲೂ ಆಶ್ರಮವಿದೆ. ಅಲ್ಲದೆ ಸ್ವಂತ ಕಟ್ಟಡವೊಂದಿದ್ದಲ್ಲಿ, ವಿಶೇಷ ಮಕ್ಕಳಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನೂ ಮಾಡಬಹುದಿತ್ತು ಎನ್ನುವ ಅಭಿಲಾಷೆಯನ್ನೂ ಈ ದಂಪತಿಗಳು ಹೊಂದಿದ್ದಾರೆ.

ಪ್ರತೀ ದಿನವೂ ಮಕ್ಕಳಿಗೆ ದೈನಂದಿನ ಚಟುವಟಿಕೆಗಳನ್ನು ತಾವೇ ಮಾಡಿಕೊಳ್ಳುವ ತರಬೇತಿ, ಬಳಿಕ ಮಕ್ಕಳಿಗೆ ಯೋಗ, ವ್ಯಾಯಾಮವನ್ನು ಹೇಳಿಕೊಡಲಾಗುತ್ತಿದೆ. ಮಕ್ಕಳು ಎಲ್ಲಾ ಮಕ್ಕಳಂತೆ ಶಿಕ್ಷಣ ಪಡೆಯಬೇಕು ಎನ್ನುವ ಕಾರಣಕ್ಕೆ ಇರುವ ವ್ಯವಸ್ಥೆಯಲ್ಲಿಯೇ ಮಕ್ಕಳಿಗೆ ಶಿಕ್ಷಣದ ಜೊತೆಗೆ ಕಂಪ್ಯೂಟರ್ ಜ್ಞಾನವನ್ನೂ ಇಲ್ಲಿ ನೀಡಲಾಗುತ್ತಿದೆ. ಒಟ್ಟಿನಲ್ಲಿ ಎಲ್ಲವೂ ಸರಿಯಿರುವ ಮಕ್ಕಳನ್ನೇ ಸರಿಯಾಗಿ ನೋಡಿಕೊಳ್ಳಲಾಗದ ಪೋಷಕರಿರುವ ಈ ಕಾಲದಲ್ಲಿ ಈ ವಿಶೇಷ ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಿರುವ ಅಣ್ಣಪ್ಪ ದಂಪತಿಗಳ ಕಾರ್ಯ ಶ್ಲಾಘನೀಯ

Ads on article

Advertise in articles 1

advertising articles 2

Advertise under the article