ಮಂಗಳೂರು: ಚಿನ್ನದಂಗಡಿಯಿಂದ ಒಡವೆ ಕದ್ದು ಓಡಿಹೋದಾತನಿಗೆ 1 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ
Friday, January 7, 2022
ಮಂಗಳೂರು: ಚಿನ್ನದಂಗಡಿಯಿಂದ ಒಡವೆ ಕಳವುಗೈದು ಓಡಿಹೋಗಿರುವ ವ್ಯಕ್ತಿಯ ಮೇಲಿನ ಆರೋಪ ಸಾಬೀತಾಗಿದ್ದು, ಅಪರಾಧಿಗೆ 2ನೇ ಸಿಜೆಎಂ ನ್ಯಾಯಾಲಯ 1 ವರ್ಷ ಕಠಿಣ ಸಜೆ ಮತ್ತು 5 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
ಕೇರಳ ರಾಜ್ಯದ ಕಾಸರಗೋಡು ತಾಲೂಕಿನ ಸಜು ಕೆ.ಜಿ. ಅಲಿಯಾಸ್ ಗೋಪಿ ಶಿಕ್ಷೆಗೊಳಗಾದ ಅಪರಾಧಿ. ಸಜು 2021ರ ಮಾರ್ಚ್ 4ರಂದು ಮಂಗಳೂರಿನ ಕಾರ್ ಸ್ಟ್ರೀಟ್ ನಲ್ಲಿರುವ ಅರುಣ್ ಜಿ. ಶೇಟ್ ಜುವೆಲ್ಸ್ ಆ್ಯಂಡ್ ಡೈಮಂಡ್ ವರ್ಕ್ಸ್ ಮಳಿಗೆಗೆ ಒಡವೆ ಖರೀದಿ ನೆಪದಲ್ಲಿ ಬಂದಿದ್ದಾನೆ. ಬಳಿಕ ಒಡವೆ ನೋಡುವಂತೆ ನಟಿಸಿ ಚಿನ್ನದಂಗಡಿ ಮಾಲಕ ಅರುಣ್ ಜಿ. ಶೇಟ್ ತೋರಿಸಿದ್ದ 2900 ಗ್ರಾಂ ತೂಕದ 12,800 ರೂ. ಮೌಲ್ಯದ ಉಂಗುರವನ್ನು ಕಿತ್ತು ಅಲ್ಲಿಂದ ಕಾಲ್ಕಿತ್ತಿದ್ದಾನೆ. ಈ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಂದರು ಠಾಣೆಯ ಪೊಲೀಸರು ಸಜುವನ್ನು ಒಡವೆ ಕಳವುಗೈದ ದಿನವೇ ಪಂಪ್ ವೆಲ್ ನಲ್ಲಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ 2ನೇ ಸಿಜೆಎಂ ನ್ಯಾಯಾಲಯ ಆರೋಪಿ ಸಜು ತಪ್ಪಿತಸ್ಥ ಎಂದು ಘೋಷಿಸಿದ್ದು, ನ್ಯಾಯಾಧೀಶೆ ಶಿಲ್ಪಾ ಜಿ.ಯವರು 1 ವರ್ಷ ಕಠಿಣ ಸಜೆ ಹಾಗೂ 5 ಸಾವಿರ ರೂ. ದಂಡ ವಿಧಿಸಿದ್ದಾರೆ. ದಂಡ ತೆರಲು ತಪ್ಪಿದ್ದಲ್ಲಿ 15 ದಿನಗಳ ಸೆರೆವಾಸ ಅನುಭವಿಸಬೇಕೆಂದು ಆದೇಶಿಸಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಮೋಹನ್ ಕುಮಾರ್ ಬಿ. ವಾದಿಸಿದ್ದಾರೆ.