ಮುಸ್ಲಿಂ ಮದುವೆಯ ಸಮಾರಂಭದಲ್ಲಿ ಕೊರಗಜ್ಜನ ವೇಷ ಧರಿಸಿ ನರ್ತಿಸಿದ ವರ, ಆತನ ಸಹಚರರು: ಕಾನೂನು ಕ್ರಮಕ್ಕೆ ಆಗ್ರಹ

ಮುಸ್ಲಿಂ ಮದುವೆಯ ಸಮಾರಂಭದಲ್ಲಿ ಕೊರಗಜ್ಜನ ವೇಷ ಧರಿಸಿ ನರ್ತಿಸಿದ ವರ, ಆತನ ಸಹಚರರು: ಕಾನೂನು ಕ್ರಮಕ್ಕೆ ಆಗ್ರಹ


ವಿಟ್ಲ: ಮುಸ್ಲಿಂ ಮದುವೆಯ ಸಮಾರಂಭವೊಂದರಲ್ಲಿ ಮದುಮಗನಿಗೆ ಕೊರಗಜ್ಜ ದೈವದ ವೇಷ ಹಾಕಿ ಕುಣಿಸಿದ ವೀಡಿಯೊವೊಂದು ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್ ಆಗಿದೆ.  ದುಷ್ಕರ್ಮಿಗಳ ಈ ದುಷ್ಕೃತ್ಯದಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯುಂಟಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.

ವಿಟ್ಲದ ಕೊಲ್ನಾಡು ಗ್ರಾಮದ ಅಝೀಜ್ ಎಂಬವರ ಪುತ್ರಿಯ ಮದುವೆ ದಿನ ಈ ಘಟನೆ ನಡೆದಿದೆ. ಕಾಸರಗೋಡಿನ ಸಮೀಪದ ಉಪ್ಪಳದ ಯುವಕನ ಜೊತೆ ಅಝೀಜ್ ಅವರ ಪುತ್ರಿಯ ವಿವಾಹ ಮಧ್ಯಾಹ್ನ ಜರುಗಿತ್ತು. 




ಅದೇ ದಿನ ರಾತ್ರಿ ಮುಸ್ಲಿಂ ಸಂಪ್ರದಾಯದಂತೆ ವರ, ತನ್ನ 50ಕ್ಕೂ ಅಧಿಕ ಸ್ನೇಹಿತರೊಂದಿಗೆ ವಧುವಿನ ಮನೆಗೆ (ತಾಳ) ಆಗಮಿಸಿದ್ದಾನೆ. ತಡರಾತ್ರಿ ವೇಳೆ ವರನ ಬಳಗ ವಧುವಿನ ಮನೆಗೆ ಹಾಡು ಹೇಳಿ ಕುಣಿಯುತ್ತಾ ಬಂದಿದ್ದಾರೆ. ಈ ಸಂದರ್ಭ ವರನಿಗೆ ತುಳುನಾಡಿನ ಆರಾಧ್ಯ ದೈವ ಕೊರಗಜ್ಜನ ವೇಷ ಹಾಕಲಾಗಿದೆ. ತಲೆಗೆ ಅಡಿಕೆ ಹಾಳೆ ಟೋಪಿ ಹಾಕಿ, ಮುಖಕ್ಕೆ ಕಪ್ಪು ಬಣ್ಣ ಬಳಿದುಕೊಂಡು, ಗಡ್ಡವನ್ನು ಬಿಳಿ ಮಾಡಿಕೊಂಡು ವರನನ್ನು ಅಣಿಗೊಳಿಸಿ ಹಾಡು ಹಾಡುತ್ತಾ ಬಂದಿದ್ದಾರೆ‌.

ಮುಸ್ಲಿಂ ಯುವಕರು ಈ ರೀತಿಯ ಕುಕೃತ್ಯ ಎಸಗುವ ಮೂಲಕ ದೈವಾದಕರ ಧಾರ್ಮಿಕ ನಂಬಿಕೆಗೆ ಧಕ್ಕೆ ತಂದಿದ್ದಾರೆ. ಅಷ್ಟೇ ಅಲ್ಲದೆ, ಕೊರಗ ಸಮುದಾಯವನ್ನೂ ಅವಮಾನಿಸಿದ್ದಾರೆ ಎಂಬ ಆಕ್ರೋಶ ಕೇಳಿಬಂದಿದೆ. 

ಈ ಹುಚ್ಚಾಟ ಪ್ರದರ್ಶಿಸಿದ ವರ ಮತ್ತು ಆತನ ಸಹಚರರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವ ಮೂಲಕ ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡಬೇಕೆಂದು ಆಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಘಟನೆಯನ್ನು ತೀವ್ರವಾಗಿ ಖಂಡಿಸಿದ ದ.ಕ. ಜಿಲ್ಲಾ ದಲಿತ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಸೇಸಪ್ಪ ಬೆದ್ರಕಾಡು, ಕಿಡಿಗೇಡಿಗಳ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article