ಪೊಲೀಸ್ ಠಾಣೆಯಲ್ಲಿ ಎಣ್ಣೆ ಪಾರ್ಟಿ, ಕರ್ತವ್ಯ ಲೋಪ,ಅಶಿಸ್ತು ಪ್ರಕರಣ: ಮಂಗಳೂರು ಮಹಿಳಾ ಠಾಣೆಯ ಎಲ್ಲಾ 32 ಮಂದಿ ಪೊಲೀಸರು ವರ್ಗಾವಣೆ!
Thursday, January 6, 2022
ಮಂಗಳೂರು: ಅಶಿಸ್ತು, ಗುಂಪುಗಾರಿಕೆ, ಕರ್ತವ್ಯಲೋಪ ಹಿನ್ನೆಲೆಯಲ್ಲಿ ಮಂಗಳೂರು ನಗರದ ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಎಲ್ಲಾ 32 ಮಂದಿ ಸಿಬ್ಬಂದಿಯನ್ನು ವಿವಿಧ ಠಾಣೆಗಳಿಗೆ ವರ್ಗಾವಣೆ ಮಾಡಿ ಮಂಗಳೂರು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ.
ಕಳೆದ ಆಗಸ್ಟ್ 26 ರಂದು ಸಂಜೆ ನಗರದ ಪಾಂಡೇಶ್ವರದಲ್ಲಿರುವ ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ಠಾಣೆಯಲ್ಲಿಯೇ ಮದ್ಯ ಪಾರ್ಟಿ ನಡೆಸಿರುವ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಪಾರ್ಟಿಯ ದೃಶ್ಯ ಠಾಣೆಯ ಸಿಸಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ದಾಖಲಾಗಿತ್ತು. ದೃಶ್ಯಾವಳಿಯನ್ನು ಪರಿಶೀಲನೆ ನಡೆಸಿದ ನಗರ ಉಪ ವಿಭಾಗದ ಎಸಿಪಿರವರು ಸಲ್ಲಿಸಿರುವ ಪ್ರಾಥಮಿಕ ವಿಚಾರಣೆಯಿಂದ ಆರೋಪವು ಮೇಲ್ನೋಟಕ್ಕೆ ಧೃಡಪಟ್ಟಿರುತ್ತದೆ. ಈ ಹಿನ್ನೆಲೆಯಲ್ಲಿ ಮಹಿಳಾ ಪೊಲೀಸ್ ಠಾಣೆಯ ಎಎಸ್‌ಐಗಳಾದ ಬಾಬುನಾಯ್ಕ ಮತ್ತು ದಯಾನಂದ ಹೆಡ್ ಕಾನ್ ಸ್ಟೇಬಲ್ ರವಿಚಂದ್ರ, ಹಾಗೂ ಇಬ್ಬರು ಮಹಿಳಾ ಸಿಬ್ಬಂದಿಯನ್ನು ಸೇವೆಯಿಂದ ಅಮಾನತ್ತುಗೊಳಿಸಿಲಾಗಿದೆ.
ಇನ್ನು, ಜುಲೈ ತಿಂಗಳಲ್ಲಿ ಕಂಕನಾಡಿ ಪೊಲೀಸ್ ಠಾಣೆಯ ಪೊಲೀಸ್ ಹೆಡ್ ಕಾನ್ ಸ್ಟೇಬಲ್ ವಿನೋದ್ ಅಪ್ರಾಪ್ತ ಬಾಲಕಿಗೆ ಮೊಬೈಲ್ ಮೂಲಕ ಅಶ್ಲೀಲ ಸಂದೇಶ ಕಳುಹಿಸಿ ಅನುಚಿತವಾಗಿ ವರ್ತಿಸಿದ್ದ. ಈ ಬಗ್ಗೆ ಮಹಿಳಾ ಠಾಣೆಯಲ್ಲಿ ಪೊಕ್ಸೊ ಕಾಯಿದೆಯಡಿ ಪ್ರಕರಣ ದಾಖಲಾಗಿತ್ತು. ಆರೋಪಿತನನ್ನು ಅಮಾನತು ಮಾಡಿ ತನಿಖೆಯನ್ನು ಮಹಿಳಾ ಠಾಣೆಯ ಪಿಎಸ್ಐ ರೋಸಮ್ಮ ಅವರಿಗೆ ವಹಿಸಲಾಗಿತ್ತು. ಅಮಾನತು ಮಾಡಲಾಗಿದೆ. ಆದರೆ ರೋಸಮ್ಮ ತನಿಖೆಯನ್ನು ವಿಳಂಬಗೊಳಿಸಿದ್ದಲ್ಲದೆ ಟೆಕ್ನಿಕಲ್ ಎವಿಡೆನ್ಸ್ ನ್ನು ಕಲೆ ಹಾಕಿರಲ್ಲಿಲ್ಲ.ಮತ್ತು ಅರೋಪಿಯ ಪರ ವರ್ತಿಸಿದ್ದಾರೆ ಎಂಬ ಅರೋಪವೋ ಈ ಅಧಿಕಾರಿಯ ಮೇಲಿತ್ತು.ಈ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿರುವ ಕಾರಣದಿಂದಾಗಿ ರೋಸಮ್ಮರನ್ನು ಅಮಾನತುಗೊಳಿಸಿದ್ದಾರೆ.
ಠಾಣೆಯಲ್ಲಿ ಅಶಿಸ್ತು, ಗಂಪುಗಾರಿಕೆ, ಕರ್ತವ್ಯ ಲೋಪ ಅರೋಪದ ಮೇಲೆ ಮಹಿಳಾ ಪೊಲೀಸ್ ಠಾಣೆಯ ಕರ್ತವ್ಯದಲ್ಲಿದ್ದ ಠಾಣೆಯ ಎಲ್ಲಾ 32 ಅಧಿಕಾರಿ ಸಿಬ್ಬಂದಿಯನ್ನು ಬೇರೆ ಬೇರೆ ಠಾಣೆಗೆ ವರ್ಗಾವಣೆಗೊಳಿಸಲಾಗಿದೆ.ಖಾಲಿಯಾಗಿರುವ ಹುದ್ದೆಗೆ ನಗರದ ಬೇರೆ ಬೇರೆ ಠಾಣೆಯ ಅಧಿಕಾರಿ, ಸಿಬ್ಬಂದಿಗಳನ್ನು ಮಹಿಳಾ ಪೊಲೀಸ್ ಠಾಣೆಗೆ ನಿಯುಕ್ತಿಗೊಳಿಸಲಾಗಿರುತ್ತದೆ.