ಪತ್ನಿಯದ್ದೇ ಅಶ್ಲೀಲ ವೀಡಿಯೋ ಮಾಡಿ ಬ್ಲಾಕ್ ಮೈಲ್ (blackmail):ವರದಕ್ಷಿಣೆ ನೀಡುವಂತೆ ಪೀಡಿಸುತ್ತಿದ್ದ ಪತಿಯ ಮೇಲೆ ಕೇಸ್(case)
Monday, January 17, 2022
ಶಿವಮೊಗ್ಗ: ಪತ್ನಿಯದ್ದೇ ನಗ್ನ ವಿಡಿಯೋ ಮಾಡಿ blackmail ಮಾಡಿ, ವರದಕ್ಷಿಣೆ ಹಣ ತರುವಂತೆ ಕಿರುಕುಳ ನೀಡುತ್ತಿದ್ದ ಪತಿ ಮತ್ತು ಆತನ ಪೋಷಕರ ವಿರುದ್ಧ ಶಿವಮೊಗ್ಗದ, ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತನ್ನ ಬೆತ್ತಲೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಮಾನ ಹರಾಜು ಹಾಕುವುದಾಗಿ ಹೇಳಿ ಬೆದರಿಕೆ ಒಡ್ಡಿದ್ದಲ್ಲದೆ, ತವರು ಮನೆಯಿಂದ ಹಣ ಕೇಳಿ ತರುವಂತೆ ಒತ್ತಡ ಹೇರುತ್ತಿದ್ದ ಬಗ್ಗೆ ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ನಿವಾಸಿ ಸಲ್ಮಾನ್,ಅತ್ತೆ ಸಾಹಿರಾ, ಮಾವ ಶೌಕತ್ ಖಾನ್, ತಂಗಿ ಸಮೀನಾ ವಿರುದ್ಧ ಶಿವಮೊಗ್ಗದ ರಿಪ್ಪನ್ ಪೇಟೆ ಠಾಣೆಯಲ್ಲಿ ಯುವತಿ ದೂರು ನೀಡಿದ್ದು,ಕೇಸು ದಾಖಲಾಗಿದೆ.
ಯುವತಿ ಶಿವಮೊಗ್ಗ ಜಿಲ್ಲೆಯ ರಿಪ್ಪನ್ ಪೇಟೆಯ ಹುಂಚ ನಿವಾಸಿಯಾಗಿದ್ದು, ಕಳೆದ ವರ್ಷ ಈಕೆಯನ್ನು ಶೃಂಗೇರಿಯ ಸಲ್ಮಾನ್ ಜೊತೆ ಮದುವೆ ಮಾಡಿಕೊಡಲಾಗಿತ್ತು. ಮದುವೆಯ ಸಂದರ್ಭದಲ್ಲಿ ಮೂರು ಲಕ್ಷ ನಗದು ವರದಕ್ಷಿಣೆ ಜೊತೆಗೆ 90 ಗ್ರಾಮ್ ಚಿನ್ನಾಭರಣ ನೀಡುವ ಬಗ್ಗೆ ಮಾತುಕತೆ ನಡೆದಿತ್ತು.
ಮದುವೆಯ ನಂತರ 90 ಗ್ರಾಮ್ ಚಿನ್ನಾಭರಣ, ಎರಡು ಲಕ್ಷ ನಗದು ನೀಡಲಾಗಿತ್ತು. ಒಂದು ಲಕ್ಷ ನಗದು ಕೊಡಲು ಬಾಕಿಯಾಗಿದ್ದ ವಿಚಾರದಲ್ಲಿ ಯುವತಿಗೆ, ಗಂಡ ಸಲ್ಮಾನ್ ಪದೇ ಪದೇ ಯುವತಿಗೆ ಕಿರುಕುಳ ನೀಡುತ್ತಿದ್ದ. ಇದಕ್ಕೆ ಅತ್ತೆ,ಮಾವ ಮತ್ತು ನಾದಿನಿ ಸಮೀನಾ ಕೂಡಾ ಸಾಥ್ ನೀಡಿದ್ದರು.
ಇದಲ್ಲದೆ, ಸಲ್ಮಾನ್ ಈಕೆಯನ್ನು ಬೆತ್ತಲಾಗಿಸಿ ವಿಡಿಯೋ ಮಾಡಿದ್ದು, ಅದೇ ವಿಡಿಯೋ ಮುಂದಿಟ್ಟು ಹಣ ತಂದು ಕೊಡದಿದ್ದರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ನಡತೆ ಸರಿ ಇಲ್ಲ ಎಂದು ಸುದ್ದಿ ಹಬ್ಬಿಸುತ್ತೇನೆ ಎಂದು ಬೆದರಿಸಿ ಬ್ಲಾಕ್ಮೈಲ್ ಮಾಡಲಾರಂಭಿಸಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾಳೆ.