ಮಗಳಿಗೆ ನಾನು ತಂದಿರುವ ಹೊಸ ಬಟ್ಟೆಯನ್ನೇ ತೊಡಿಸಿ, ಮೂವರನ್ನು ಒಟ್ಟಿಗೆ ಮಣ್ಣು ಮಾಡಿರೆಂದು ಡೆತ್ ನೋಟ್ (Death Note) ಬರೆದಿಟ್ಟು ಮಗುವಿಗೆ ವಿಷವುಣಿಸಿ, ದಂಪತಿ ನೇಣಿಗೆ ಶರಣು!
Tuesday, January 11, 2022
ಮಂಡ್ಯ: 'ಮಗಳಿಗೆ ನಾನು ತಂದಿರುವ ಹೊಸ ಬಟ್ಟೆಯನ್ನೇ ತೊಡಿಸಿ. ನಮ್ಮ ಕೊನೆಯ ಆಸೆಯಂತೆ ಮೂವರನ್ನೂ ಒಟ್ಟಿಗೆ ಮಣ್ಣು ಮಾಡಿಬಿಡಿ. ನಮ್ಮನ್ನು ಖುಷಿಯಿಂದ ಕಳುಹಿಸಿಕೊಡಿ' ಎಂದು ಡೆತ್ ನೋಟ್ ಬರೆದಿಟ್ಟು ಒಂದು ವರ್ಷದ ಮಗುವಿಗೆ ವಿಷವುಣಿಸಿ ದಂಪತಿಯು ನೇಣಿಗೆ ಶರಣಾಗಿರುವ ಮನಕಲಕುವ ಘಟನೆಯೊಂದು ಮಂಡ್ಯದ ನಾಗಮಂಗಲದಲ್ಲಿ ನಡೆದಿದೆ.
ಮಂಡ್ಯ ನಾಗಮಂಗಲ ತಾಲೂಕಿನ ಗಂಗವಾಡಿ ಗ್ರಾಮದ ರಘು(28), ತನುಶ್ರೀ (24) ಹಾಗೂ ಒಂದು ವರ್ಷದ ಅವರ ಪುತ್ರಿ ಮೃತಪಟ್ಟ ದುರ್ದೈವಿಗಳು.
ಮಂಡ್ಯ ನಿವಾಸಿ ರಘು ಅವರು ಗಂಗಾವಾಡಿ ಗ್ರಾಮದ ತನುಶ್ರೀ ಎಂಬುವವರನ್ನು ಪ್ರೇಮಿಸಿ ವಿವಾಹವಾಗಿದ್ದರು. 8 ದಿನಗಳ ಹಿಂದೆ ಪತಿ ಹಾಗೂ ಮಗುವಿನೊಂದಿಗೆ ತನುಶ್ರೀ ತನ್ನ ತಂದೆ ಮನೆಗೆ ಬಂದಿದ್ದರು. ಇಂದು ಮಗುವನ್ನೂ ಕೊಂದು ದಂಪತಿ ನೇಣಿಗೆ ಶರಣಾಗಿದ್ದಾರೆ.
ಆತ್ಮಹತ್ಯೆಗೂ ಮುನ್ನ ತನುಶ್ರೀ ಡೆತ್ನೋಟ್ ಬರೆದಿಟ್ಟಿದ್ದು ಇದರಲ್ಲಿ "ನಮ್ಮ ಸಾವಿಗೆ ನಾವೇ ಕಾರಣ. ದಯವಿಟ್ಟು ನಮ್ಮನ್ನು ಕ್ಷಮಿಸಿ ಬಿಡಿ. ನನ್ನ ಪತಿಯ ಮೊಬೈಲ್ನಲ್ಲಿ ಇರುವ ನಂಬರ್ಗಳಿಗೆ ಕಾಲ್ ಮಾಡಿ ನಮ್ಮ ಸಾವಿನ ಸುದ್ದಿ ತಿಳಿಸಿ. ನಾನು ತಂದಿರುವ ಹೊಸ ಬಟ್ಟೆಯನ್ನೇ ಮಗಳಿಗೆ ತೊಡಿಸಿ ಮೂವರನ್ನೂ ಒಟ್ಟಿಗೆ ಮಣ್ಣು ಮಾಡಿ. ಇದೇ ನನ್ನ ಕೊನೆಯಾಸೆ. ನಮ್ಮನ್ನು ಸಂತೋಷದಿಂದ ಕಳುಹಿಸಿಕೊಡಿ. ಯಾರೂ ಜಗಳವಾಡಬೇಡಿ" ಎಂದು ಬರೆದಿದ್ದಾರೆ.
ಆದರೆ ಇವರ ಆತ್ಮಹತ್ಯೆಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ನಾಗಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.