ನಾಪತ್ತೆಯಾಗಿದ್ದ ಖ್ಯಾತ ನಟಿ ರೈಮಾ ಶಿಮು ಶವವಾಗಿ ಪತ್ತೆ ; ಹತ್ಯೆಗೈದು ಗೋಣಿಚೀಲದಲ್ಲಿ ಕಟ್ಟಿ ಮೋರಿಗೆಸೆದಿದ್ದ ಪಾಪಿ ಗಂಡ !(murder)
Wednesday, January 19, 2022
ಬಾಂಗ್ಲಾದೇಶದ ಖ್ಯಾತ ಸಿನಿಮಾ ನಟಿ ರೈಮಾ ಇಸ್ಲಾಮ್ ಶಿಮು(45) ಮೃತಪಟ್ಟ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದ್ದು, ಆಕೆಯ ಪತಿಯೇ ಕೊಲೆ ಮಾಡಿದ್ದಾನೆ ಎನ್ನುವ ಮಾಹಿತಿ ಲಭಿಸಿದೆ. ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕೊಲೆಗೈದ ವಿಚಾರವನ್ನು ಒಪ್ಪಿಕೊಂಡಿದ್ದಾನೆ.
ಜನವರಿ 15 ರಂದು ನಾಪತ್ತೆಯಾಗಿದ್ದ ನಟಿ ರೈಮಾ ಇಸ್ಲಾಮ್ ಶಿಮು ಎರಡು ದಿನಗಳ ಬಳಿಕ ಅವರು, ಢಾಕಾ ನಗರದ ಕಿರಾಣಿಗಂಜ್ ಏರಿಯಾದಲ್ಲಿ ರಸ್ತೆ ಬದಿಯ ಮೋರಿಯೊಂದರಲ್ಲಿ ಮೃತದೇಹವಾಗಿ ಪತ್ತೆಯಾಗಿದ್ದರು. ಗೋಣಿ ಚೀಲದಲ್ಲಿ ಕಟ್ಟಿ ಎಸೆಯಲಾಗಿದ್ದ ಮೃತದೇಹವನ್ನು ಗುರುತಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಮೃತದೇಹದ ಶವ ಮಹಜರು ನಡೆಸಲು ಕಳುಹಿಸಿಕೊಟ್ಟಿದ್ದರು. ಇದಕ್ಕೂ ಮೊದಲು ನಾಪತ್ತೆಯಾದ ದಿನ ಬೆಳಗ್ಗೆ ಶಿಮು ಗಂಡ ಶೆಖಾವತ್ ಆಲಿ ನೋಬಲ್, ತನ್ನ ಪತ್ನಿ ನಾಪತ್ತೆಯಾಗಿದ್ದಾಗಿ ಪೊಲೀಸ್ ದೂರು ನೀಡಿದ್ದ.
ಶಿಮು ಮೃತದೇಹದ ಪತ್ತೆಯಾದ ಬೆನ್ನಲ್ಲೇ ಪೊಲೀಸರು ಆಕೆಯ ಪತಿ ಶೆಖಾವತ್ ಮತ್ತು ಆತನ ಕಾರು ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಶೆಖಾವತ್ ಸೂಚನೆಯಂತೆ ದುಷ್ಕರ್ಮಿಗಳ ತಂಡ, ನಟಿಯನ್ನು ಅಪಹರಿಸಿ, ಕೊಲೆಗೈದು ಕಿರಾಣಿಗಂಜ್ ಏರಿಯಾದ ಮೋರಿಯೊಂದರಲ್ಲಿ ಎಸೆದಿದ್ದಾರೆ ಎಂದು ಕೊಲೆ ಕೃತ್ಯದ ಬಗ್ಗೆ ಗಂಡ ತಪ್ಪೊಪ್ಪಿಕೊಂಡಿದ್ದಾನೆ. ಕೊಲೆಯ ಕಾರಣ ಏನು ಎನ್ನುವುದು ಇನ್ನೂ ದೃಢಪಟ್ಟಿಲ್ಲ. ನಟಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸುವಂತೆ ಆಕೆಯ ಕುಟುಂಬಸ್ಥರು ಆಗ್ರಹಿಸಿದ್ದಾರೆ.
1998ರಲ್ಲಿ ಸಿನಿಮಾ ರಂಗ ಪ್ರವೇಶಿಸಿದ್ದ ರೈಮಾ ಶಿಮು ಬಾಂಗ್ಲಾದಲ್ಲಿ ಹೆಸರಾಂತ ನಟಿ.25ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಲ್ಲದೆ, ಟಿವಿ ಸೀರಿಯಲ್, ನಾಟಕಗಳ ನಿರ್ಮಾಣದಲ್ಲಿಯೂ ತೊಡಗಿಸಿಕೊಂಡಿದ್ದರು. ಬಾಂಗ್ಲಾ ಸಿನಿಮಾ ಕಲಾವಿದರ ಸಂಘದ ಗೌರವ ಸದಸ್ಯೆಯೂ ಆಗಿದ್ದರು.