ಸಂಜೀವಿನಿ ಆಗಬೇಕಿದ್ದ ವ್ಯಾಕ್ಸಿನ್ ವ್ಯಕ್ತಿಯ ಜೀವಕ್ಕೆ ಕಂಟಕ:ಆರೋಗ್ಯ ಇಲಾಖೆಯ ಮಹಾ ಎಡವಟ್ಟಿನಿಂದ ಕೊಳೆಯುತ್ತಿರುವ ಕೈ(vaccination)
Tuesday, January 18, 2022
ಜೀವ ಉಳಿಸಿಕೊಳ್ಳಲು ವ್ಯಾಕ್ಸಿನೇಷನ್ ಪಡೆದ ವ್ಯಕ್ತಿಗೆ ಅದೇ ವ್ಯಾಕ್ಸಿನ್ ಕುತ್ತಾಗಿ ಪರಿಣಮಿಸಿದೆ.ವ್ಯಾಕ್ಸಿನ್ ಪಡೆದ ಯುವಕನೊಬ್ಬನ ಕೈ ಕೊಳೆಯುತ್ತಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಕೊಪ್ಪಳ ತಾಲೂಕಿನ ಬಹದ್ದೂರಬಂಡಿ ಗ್ರಾಮಸ್ಥ ಹನುಮಂತಪ್ಪ ತಳವಾರ್ ಎಂಬುವವರು ಕೈ ಕಳೆದುಕೊಳ್ಳುವ ಸ್ಥಿತಿಗೆ ಬಂದ ವ್ಯಕ್ತಿ.
ಆರೋಗ್ಯ ಇಲಾಖೆ ಸಿಬ್ಬಂದಿ ಸರಿಯಾಗಿ ಕೈಗೆ ವ್ಯಾಕ್ಸಿನೇಷನ್ ಹಾಕಿಲ್ಲದ ಕಾರಣ ಈ ಸ್ಥಿತಿ ಬಂದಿದೆ ಎಂದು ಹನುಮಂತಪ್ಪನ ಕುಟುಂಬಸ್ಥರು ಆರೋಪಿಸಿದ್ದಾರೆ.2021 ಅಕ್ಟೋಬರ್ 4 ರಂದು ಆರೋಗ್ಯ ಇಲಾಖೆ ಸಿಬ್ಬಂದಿ ಪ್ರಭಾವತಿ ಎನ್ನುವವರಿಂದ ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಂಡಿದ್ದ ಹನುಮಂತಪ್ಪನ ಕೈ ನಾಲ್ಕು ದಿನಗಳ ಬಳಿಕ ಊದಿಕೊಳ್ಳಲು ಶುರುವಾಗಿದ್ದು, ವ್ಯಾಕ್ಸಿನ್ ಪಡೆದ ಜಾಗದಲ್ಲಿ ಗಂಭೀರ ಗಾಯವಾಗಿ ಕೊಳೆಯಲು ಶುರುವಾಗಿದೆ.ತಕ್ಷಣ ಈ ಕುರಿತು ಹನುಮಂತಪ್ಪ ಆರೋಗ್ಯ ಇಲಾಖೆಯವರ ಗಮನಕ್ಕೆ ತಂದಿದ್ದಾರೆ. ಈ ವೇಳೆ ಆರೋಗ್ಯ ಇಲಾಖೆ ಅಧಿಕಾರಿ ಯಾವುದೇ ಸ್ಪಂದನೆ ನೀಡದೆ ಬೇಕಾಬಿಟ್ಟಿಯಾಗಿ ನಡೆದುಕೊಂಡಿದ್ದಾರೆ ಎಂದು ದೂರಿದ್ದಾರೆ.
ಆರೋಗ್ಯ ಇಲಾಖೆಯವರ ಎಡವಟ್ಟಿನಿಂದ ಹನುಮಂತಪ್ಪ ಕಣ್ಣೀರಲ್ಲಿ ಕೈತೊಳೆಯುತ್ತಿರುವುದು ಮಾತ್ರ ಖೇದಕರ.ಸದ್ಯ ಹನುಮಂತಪ್ಪ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನೊಂದ ಹನುಮಂತಪ್ಪನ ಕುಟುಂಬ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ