ಮಂಗಳೂರಿನಲ್ಲಿ ಮೊಬೈಲ್ ದರೋಡೆಗೈದ ಆರೋಪಿಗಳನ್ನು ಚೇಸ್ ಮಾಡಿ ಬಂಧಿಸಿದ ಪೊಲೀಸರು: Video Vairal
Thursday, January 13, 2022
ಮಂಗಳೂರು: ಮೊಬೈಲ್ ದರೋಡೆಗೈದು ಪರಾರಿಯಾಗುತ್ತಿದ್ದ ಆರೋಪಿಗಳನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ಬಂಧಿಸಿರುವ ಘಟನೆ ಮಂಗಳೂರಿನಲ್ಲಿ ನಿನ್ನೆ ಮಧ್ಯಾಹ್ನ ನಡೆದಿದೆ.
ನೀರುಮಾರ್ಗ ನಿವಾಸಿ ಹರೀಶ್ ಪೂಜಾರಿ(32) ಮತ್ತು ಅತ್ತಾವರ ನಿವಾಸಿ ಶಮಂತ್ (20) ಬಂಧಿತ ಆರೋಪಿಗಳು.
ನಗರದಲ್ಲಿ ಗಾರೆ ಹಾಗೂ ಟೈಲ್ಸ್ ಕೆಲಸ ಮಾಡುತ್ತಿದ್ದ ಉತ್ತರ ಭಾರತ ಮೂಲದ ಕಾರ್ಮಿಕರೊಬ್ಬರು ನಗರದ ನೆಹರೂ ಮೈದಾನದ ಬಳಿ ವಿಶ್ರಾಂತಿ ಪಡೆಯುತ್ತಿದ್ದರು. ಈ ಸಂದರ್ಭ ಅಲ್ಲಿಗೆ ಬಂದ ಆರೋಪಿಗಳು ಅವರ ಮೊಬೈಲ್ ಫೋನ್ ದರೋಡೆಗೈದು ಓಟಕ್ಕಿತ್ತಿದ್ದಾರೆ. ಆಗ ಮೊಬೈಲ್ ಫೋನ್ ಕಳೆದುಕೊಂಡ ವ್ಯಕ್ತಿ ಬೊಬ್ಬೆಯಿಟ್ಟುಕೊಂಡು ಓಡಿಸಿಕೊಂಡು ಬಂದಿದ್ದಾರೆ. ಆಗ ಅಲ್ಲಿದ್ದ ಪೊಲೀಸ್ ಎಎಸ್ಐ ವರುಣ್ ಆಳ್ವ ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿದ್ದಾರೆ.
ಕಾರ್ಯಾಚರಣೆಯಲ್ಲಿ ಮೊದಲು ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿ, ಆತನಿಂದಲೇ ವೆನ್ಲಾಕ್ ನ ಅಯ್ಯಪ್ಪ ದೇವಸ್ಥಾನದ ಬಳಿ ಕರೆಸಿಕೊಂಡು ಮತ್ತೋರ್ವನನ್ನು ಬಲೆಗೆ ಕೆಡವಲು ಪ್ಲ್ಯಾನ್ ರೂಪಿಸಿದ್ದಾರೆ. ಆದರೆ, ಪೊಲೀಸರ ತಂತ್ರ ಅರಿತ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಸುಮಾರು 1ಕಿ.ಮೀ. ನಷ್ಟು ಬೆನ್ನಟ್ಟಿ ಕಳ್ಳನನ್ನು ಹಿಡಿಯುವಲ್ಲಿ ವರುಣ್ ಆಳ್ವ ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಯ ದೃಶ್ಯಾವಳಿ ಮೊಬೈಲ್ ನಲ್ಲಿ ಸೆರೆಯಾಗಿ ಭಾರೀ ವೈರಲ್ ಆಗಿದೆ.
ಆರೋಪಿಗಳಿಂದ ಮೊಬೈಲನ್ನು ವಶಕ್ಕೆ ಪಡೆಯಲಾಗಿದ್ದು, ಪಾಂಡೇಶ್ವರ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಿಸಲಾಗಿದೆ. ಸಮಯ ಪ್ರಜ್ಞೆ ಮೆರೆದು ಆರೋಪಿಯನ್ನು ಬೆನ್ನಟ್ಟಿದ ವರುಣ್ ಕಾರ್ಯ ಪ್ರಶಂಸೆಗೆ ಪಾತ್ರವಾಗಿದೆ. ಈ ಬಗ್ಗೆ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ 10 ಸಾವಿರ ರೂ. ನಗದು ಬಹುಮಾನ ಘೋಷಣೆ ಮಾಡಿದ್ದಾರೆ.