ಮಂಗಳೂರು: ಯಕ್ಷಗಾನಕ್ಕೂ ಕಾಲಿಟ್ಟಿತು 'ಪುಷ್ಪಾ' ಸಿನಿಮಾ 'ಶ್ರೀವಲ್ಲಿ' ಹಾಡು, ಸ್ಟೆಪ್!-ಯಕ್ಷಗಾನಾಭಿಮಾನಿಗಳ ಆಕ್ರೋಶ
Sunday, February 20, 2022
ಮಂಗಳೂರು: ಕರಾವಳಿಯಲ್ಲಿ ಗಂಡುಕಲೆಯೆಂದೇ ಪ್ರಸಿದ್ಧವಾದ ಯಕ್ಷಗಾನವು ತನ್ನದೇ ಸಾಂಪ್ರದಾಯಿಕತೆ, ವ್ಯಾಪ್ತಿಯನ್ನು ಹೊಂದಿದೆ. ಮುಮ್ಮೇಳ, ಹಿಮ್ಮೇಳಗಳೆರಡರಲ್ಲೂ ಶುದ್ಧ ಪರಂಪರೆಯನ್ನು ಹೊಂದಿದೆ. ಆದರೆ ಇತ್ತೀಚೆಗೆ ಮನರಂಜನೆ ಎಂಬ ಹೆಸರಿನಲ್ಲಿ ಸಿನಿಮಾ ಧಾಟಿಯ ಹಾಡುಗಳು ಯಕ್ಷಗಾನದ ಸಂಪ್ರದಾಯ, ಪರಂಪರೆಗೆ ಕೊಡಲಿಯೇಟು ಕೊಡುತ್ತಿದೆ ಎಂಬ ಕೂಗು ಸಾಕಷ್ಟು ಕಾಲದಿಂದ ಕೇಳಿ ಬರುತ್ತಿದೆ. ಇದೀಗ ಸ್ಟಾರ್ ನಟ ಅಲ್ಲು ಅರ್ಜುನ್ ಅಭಿನಯದ 'ಪುಷ್ಪಾ' ಸಿನಿಮಾದ 'ಶ್ರೀವಲ್ಲಿ' ಹಾಡು ಹಾಗೂ ಅದರ ಫೇಮಸ್ ಸ್ಟೆಪ್ ಯಕ್ಷಗಾನದಲ್ಲಿ ನೇರವಾಗಿ ಬಳಕೆಯಾಗಿದೆ. ಇದು ಯಕ್ಷಾಭಿಮಾನಿಗಳ, ಸಂಪ್ರದಾಯ ಭೀರುಗಳ ಕೆಂಗಣ್ಣಿಗೆ ಗುರಿಯಾಗಿದೆ.
ಹೌದು... ತೆಂಕುತಿಟ್ಟಿನ ಪ್ರಸಿದ್ಧ ಮೇಳವಾದ ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿಯ ಯಕ್ಷಗಾನ ಸೇವೆಯಾಟದಲ್ಲಿ 'ಶ್ರೀವಲ್ಲಿ' ಹಾಡು, ಸ್ಟೆಪ್ ಕೇಳಿ ಬಂದಿದೆ. ಭಾಗವತರು 'ಶ್ರೀವಲ್ಲಿ' ಹಾಡು ಹಾಡಲಾರಂಭಿಸುತ್ತಿದ್ದಂತೆ ಯಕ್ಷಗಾನದ ಹಾಸ್ಯ ಪಾತ್ರಧಾರಿ ಸಿನಿಮಾದಲ್ಲಿ ಅಳವಡಿಸಲಾದ ಡಿಫರೆಂಟ್ ಸ್ಟೆಪ್ ಅನ್ನೇ ಹಾಕಿದ್ದಾರೆ. ಇದಕ್ಕೆ ಪ್ರೇಕ್ಷಕರು, ಹಾಗೂ ರಂಗದಲ್ಲಿರುವ ಇತರ ಮುಮ್ಮೇಳ ಹಾಗೂ ಹಿಮ್ಮೇಳ ಕಲಾವಿದರು ಬಿದ್ದು ಬಿದ್ದು ನಗುವ ದೃಶ್ಯ ಕಂಡು ಬಂದಿದೆ.
ಆದರೆ ಇದೀಗ ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಯಕ್ಷಗಾನ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮನೋರಂಜನೆಯ ಹೆಸರಿನಲ್ಲಿ ಯಕ್ಷಗಾನಕ್ಕೆ ಅಪಚಾರ ಮಾಡಲಾಗುತ್ತಿದೆ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿದೆ.