ಮಂಗಳೂರು: ಹೈಟೆಕ್ ವೇಶ್ಯೆವಾಟಿಕೆ ಪ್ರಕರಣದಲ್ಲಿ ಮತ್ತೋರ್ವ ಆರೋಪಿಯ ಬಂಧನ abdul razik ullal
Monday, March 21, 2022
ಮಂಗಳೂರು: ನಗರದಲ್ಲಿ ಇತ್ತೀಚೆಗೆ ಭಾರೀ ಸಂಚಲನ ಸೃಷ್ಟಿಸಿದ್ದ ಹೈಟೆಕ್ ವೇಶ್ಯೆವಾಟಿಕೆ ದಂಧೆ ಪ್ರಕರಣದಲ್ಲಿ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ಮತ್ತೋರ್ವ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 16ಕ್ಕೇರಿದೆ.
ಮಂಗಳೂರು ನಗರದ ಉಳ್ಳಾಲ ನಿವಾಸಿ ಅಬ್ದುಲ್ ರಾಝೀಕ್ ಉಳ್ಳಾಲ ಅಲಿಯಾಸ್ ರಫೀಕ್ ಉಳ್ಳಾಲ(44) ಬಂಧಿತ ಆರೋಪಿ. ಮಂಗಳೂರಿನ ನಂದಿಗುಡ್ಡೆಯ ಅಪಾರ್ಟ್ ಮೆಂಟ್ ವೊಂದರಲ್ಲಿ ಅಪ್ರಾಪ್ತೆ ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವತಿಯರನ್ನು ಬಳಸಿ ವೇಶ್ಯೆವಾಟಿಕೆ ದಂಧೆ ನಡೆಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಫ್ಲ್ಯಾಟ್ ಮಾಲಕಿ ಹಾಗೂ ಪಿಂಪ್ ಗಳು ಅಪ್ರಾಪ್ತೆಯರು, ಯುವತಿಯರಿಗೆ ಆಮಿಷ, ಬೆದರಿಕೆಗಳನ್ನೊಡ್ಡಿ ವೇಶ್ಯೆವಾಟಿಕೆ ದಂಧೆಗೆ ಬಳಸುತ್ತಿರುವುದು ಬೆಳಕಿಗೆ ಬಂದಿತ್ತು.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ತನಿಖೆ ಕೈಗೊಂಡು ಇಬ್ಬರು ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣದಲ್ಲಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಒಟ್ಟು10 ಪ್ರಕರಣಗಳನ್ನು ದಾಖಲಿಸಿದ್ದರು. ಇದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದವರು, ಪಿಂಪ್ ಗಳು ಹಾಗೂ ಲೈಂಗಿಕ ಕಿರುಕುಳ ನೀಡಿರುವ ಆರೋಪಿಗಳು ಸೇರಿದಂತೆ ಒಟ್ಟು 15 ಮಂದಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದೀಗ ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆ ಕೈಗೊಂಡು ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ಅಬ್ದುಲ್ ರಾಝೀಕ್ ಉಳ್ಳಾಲ ಬಂಧಿಸಿರುವ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ತನಿಖೆ ಮುಂದುವರಿದಿದೆ.