Mangalore: ಬಿಎಂಡಬ್ಲ್ಯು ಕಾರು ಚಾಲಕನ ನಿರ್ಲಕ್ಷ್ಯದ ಚಾಲನೆ ; ಗಂಭೀರ ಗಾಯಗೊಂಡಿದ್ದ ಮಹಿಳೆಯ ಮೆದುಳು ನಿಷ್ಕ್ರಿಯ, ಕುಟುಂಬಸ್ಥರಿಂದ ಅಂಗಾಂಗ ದಾನ
Saturday, April 23, 2022
ತನ್ನದಲ್ಲದ ತಪ್ಪಿಗೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಜೀವನ್ಮರಣ ಸ್ಥಿತಿಯಲ್ಲಿ ಹೋರಾಟ ಮಾಡುತ್ತಿದ್ದ ಮಹಿಳೆಯ ಬ್ರೈನ್ ಡೆಡ್ ಆದ ಹಿನ್ನೆಲೆಯಲ್ಲಿ ಕುಟುಂಬಿಕರು ಅವರ ಅಂಗಾಂಗಗಳನ್ನು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಎರಡು ವಾರಗಳ ಹಿಂದೆ (ಎಪ್ರಿಲ್ 9) ನಗರದ ಬಲ್ಲಾಳ್ ಬಾಗ್ ನಲ್ಲಿ ಮಧ್ಯಾಹ್ನ ಅಪಘಾತ ಸಂಭವಿಸಿತ್ತು. BMW ಕಾರು ಚಾಲಕ, ಮಣ್ಣಗುಡ್ಡ ನಿವಾಸಿ ಶ್ರವಣ್ ಅತಿ ವೇಗದ ಚಾಲನೆಯಿಂದಾಗಿ ಕಾರು ಡಿವೈಡರ್ ಮೇಲಿಂದ ಹಾರಿ ಎದುರಿನಿಂದ ಬರುತ್ತಿದ್ದ ಸ್ಕೂಟಿಗೆ ಡಿಕ್ಕಿಯಾಗಿದೆ. ಸ್ಕೂಟಿಯಲ್ಲಿದ್ದ ಮಹಿಳೆ ಮಂಗಳಾದೇವಿ ನಿವಾಸಿ ಪ್ರೀತಿ ಮನೋಜ್ (46) ಗಂಭೀರವಾಗಿ ಗಾಯಗೊಂಡಿದ್ದರು.ಅವರನ್ನು ನಗರದ ಎಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಜೀವನ್ಮರಣ ಸ್ಥಿತಿಯಲ್ಲಿ 13 ದಿನಗಳ ಹೋರಾಟ ನಡೆಸುತ್ತಿದ್ದ ಪ್ರೀತಿ ಮನೋಜ್ ಅವರ ಮಿದುಳು ನಿಷ್ಕ್ರಿಯಗೊಂಡಿರುವ ಬಗ್ಗೆ ವೈದ್ಯರು ಘೋಷಣೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರ ಅಂಗಾಂಗ ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದು ಈ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಪ್ರೀತಿ ಮನೋಜ್ ಅವರ ಲಿವರ್ ಅನ್ನು ಬೆಂಗಳೂರಿನ Astar CMI ಆಸ್ಪತ್ರೆಗೆ ಝೀರೋ ಟ್ರಾಫಿಕ್ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೊಂಡೊಯ್ದು ಅಲ್ಲಿಂದ ವಿಮಾನದ ಮೂಲಕ ಬೆಂಗಳೂರಿನ ಆಸ್ಪತ್ರೆಗೆ ರವಾನೆಯಾಯಿತು. ಕಿಡ್ನಿಯನ್ನು ಮಣಿಪಾಲದ KMC ಆಸ್ಪತ್ರೆಗೆ ರವಾನಿಸಲಾಗುವ ಬಗ್ಗೆ ಮಾತುಕತೆ ನಡೆಸಲಾಗುತ್ತಿದೆ.