Mangalore: ಹೆದ್ದಾರಿ ಗುಂಡಿ ಮುಚ್ಚಬೇಕಾಗಿದೆ ಮೋದಿಯವರೇ ಮತ್ತೆ ಮಂಗಳೂರಿಗೆ ಬನ್ನಿ; ಯುವಕನ ಏಕಾಂಗಿ ಪ್ರತಿಭಟನೆ
Thursday, September 29, 2022
Mangalore: ರಾಷ್ಟ್ರೀಯ ಹೆದ್ದಾರಿ ಗುಂಡಿ ಮುಚ್ಚಲು ಆಗ್ರಹಿಸಿ ಪುತ್ತೂರಿನ ಲಿಖಿತ್ ರೈ ಎಂಬ ಯುವಕ ಮಂಗಳೂರಿನ ನಂತೂರು ಜಂಕ್ಷನ್ ನಲ್ಲಿ ಒಂದು ಗಂಟೆಗಳ ಏಕಾಂಗಿ ಪ್ರತಿಭಟನೆ ನಡೆಸಿದ್ದಾರೆ.
ಈ ಹಿಂದೆ ತಮ್ಮ ಗೆಳೆಯ ಬಿಕರ್ನಕಟ್ಟೆಯಲ್ಲಿ ಬೈಕ್ ನಲ್ಲಿ ಬರುತ್ತಿದ್ದ ವೇಳೆ ರಸ್ತೆ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದರು. ಈ ಸಂದರ್ಭ ಲಿಖಿತ್ ರೈ ರಾಷ್ಟ್ರೀಯ ಹೆದ್ದಾರಿ ಹಾಗೂ ಮಂಗಳೂರು ಮನಪಾ ಮುಂಭಾಗ ಪ್ರತಿಭಟನೆ ನಡೆಸಿದ್ದರು.
ಈ ವೇಳೆ ಮಾತನಾಡಿದ ಲಿಖಿತ್ ರೈಯವರು, ಎರಡು ತಿಂಗಳ ಹಿಂದೆ ತಾನು ರಸ್ತೆ ಹೊಂಡಗಳನ್ನು ದುರಸ್ತಿಗೊಳಿಸುವಂತೆ ಪ್ರತಿಭಟನೆ ನಡೆಸಿದ್ದೆ. ಆದರೆ ಸಂಸದರು, ಎನ್ಎಚ್ಎ ಅಧಿಕಾರಿಗಳು ಎರಡು ತಿಂಗಳು ಕಳೆದರೂ ರಾಷ್ಟ್ರೀಯ ಹೆದ್ದಾರಿ ದುರಸ್ತಿ ಮಾಡುವ ಗೋಜಿಗೇ ಹೋಗಿಲ್ಲ. ಆದರೆ ಪ್ರಧಾನಿ ಮೋದಿಯವರು ಬಂದಿದ್ದ ವೇಳೆ ಎರಡೇ ದಿನಗಳಲ್ಲಿ ಕೂಳೂರಿನ ರಸ್ತೆಯು ಸಂಪೂರ್ಣ ದುರಸ್ತಿಯಾಗಿದೆ.
ಹಾಗಾದರೆ ರಸ್ತೆ ದುರಸ್ತಿ ಆಗಬೇಕೆಂದಿದ್ದಲ್ಲಿ ಪ್ರಧಾನಿ ಮೋದಿಯವರೇ ಬರಬೇಕೆ?. ಹಾಗಾದರೆ ಮತ್ತೆ ಪ್ರಧಾನಿಯವರು ಮತ್ತೆ ಮಂಗಳೂರಿಗೆ ಬರಲಿ, ಹಾಗಾದರೂ ರಸ್ತೆ ದುರಸ್ತಿಯಾಗಲಿ. ಅವರಿಂದ ಮಾತ್ರ ಇಲ್ಲಿನ ರಸ್ತೆಯನ್ನು ದುರಸ್ತಿ ಮಾಡಲು ಸಾಧ್ಯ. ಹೆದ್ದಾರಿ ದುರಸ್ತಿ ಸಾಧ್ಯವಿಲ್ಲವೆಂದಾದಲ್ಲಿ ಜನರ ತೆರಿಗೆ ಹಣ ವಾಪಸ್ ಮಾಡಿ ಎಂದು ಲಿಖಿತ್ ರೈ ಆಗ್ರಹಿಸಿದರು.