ಮಂಗಳೂರು: ಕನ್ನಡ ಹೇರಿಕೆಯನ್ನು ಖಂಡಿಸಿ ತುಳುಭಾಷಾ ಸಂರಕ್ಷಣಾ ಸಮಿತಿಯಿಂದ ಪ್ರತಿಭಟನೆ
Thursday, September 29, 2022
ಮಂಗಳೂರು: ತುಳುನಾಡಿನಲ್ಲಿ ಮಾತೃಭಾಷೆಯನ್ನು ಕಡೆಗಣಿಸಿ ಕನ್ನಡ ಹೇರಿಕೆ ಮಾಡುತ್ತಿರುವ ಸರಕಾರದ ನೀತಿಯನ್ನು ಖಂಡಿಸಿ ತುಳುಭಾಷಾ ಸಂರಕ್ಷಣಾ ಸಮಿತಿ ಕುಡ್ಲ ನಗರದ ಕ್ಲಾಕ್ ಟವರ್ ಮುಂಭಾಗ ಪ್ರತಿಭಟನೆ ನಡೆಸಿತು. ಈ ಸಂದರ್ಭ ಪ್ರತಿಭಟನಾಕಾರರು ಬಸ್ ಅನ್ನು ತಡೆದು ತುಳುಲಿಪಿಯ ಸ್ಟಿಕ್ಕರ್ ಅಂಟಿಸಿ ಸರಕಾರದ ನಡೆಯ ವಿರುದ್ಧ ಕಿಡಿಕಾರಿದರು.
ಈ ವೇಳೆ ಪ್ರತಿಭಟನಾಕಾರರು 'ಕನ್ನಡ ಕಡ್ಡಾಯ ತುಳು ಭಾಷೆಗೆ ಅನ್ಯಾಯ', 'ಕನ್ನಡ ಸಂಸ್ಕೃತಿ ಇಲಾಖೆಯ ಸಚಿವರಿಗೆ ಧಿಕ್ಕಾರ', ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಆದರೆ ನಮಗೆ ತುಳು ಅಗತ್ಯ' ಎಂಬಂತಹ ಪೋಸ್ಟರ್ ಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.
ಈ ವೇಳೆ ಪ್ರತಿಭಟನಾಕಾರರು ಪ್ರತಿಕ್ರಿಯಿಸಿ, ತುಳುಭಾಷೆ ಒಂದು ಸಮುದಾಯದ ಒಂದು ಜಾತಿಯ ಭಾಷೆಯಲ್ಲ. ಇದೊಂದು ಪ್ರದೇಶದ ಭಾಷೆಯಾಗಿದೆ. ಸಾವಿರ ವರ್ಷಕ್ಕಿಂತ ಅಧಿಕ ವರ್ಷಗಳಲ್ಲಿ ಬಳಕೆಯಲ್ಲಿರುವ ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ದೊರಕುವ ಎಲ್ಲಾ ಅರ್ಹತೆಗಳಿರುತ್ತದೆ. ಆದರೆ ಸರಕಾರ ಇಂದು ತುಳುಭಾಷೆಗೆ ರಾಜ್ಯಭಾಷೆಯ ಸ್ಥಾನಮಾನವನ್ನು ಇನ್ನೂ ಕೊಟ್ಟಿಲ್ಲ. ಇದರಿಂದ ಕನಿಷ್ಠ ಪಕ್ಷ ಗ್ರಾಪಂನಲ್ಲೂ ತುಳು ಭಾಷೆಯಲ್ಲಿ ಮಾತನಾಡುವ ಅಧಿಕಾರವಿಲ್ಲ. ಆದ್ದರಿಂದ ಡಬ್ಬಲ್ ಇಂಜಿನ್ ತುಳುಭಾಷಾ ಹೇರಿಕೆಯನ್ನು ಕೈಬಿಟ್ಟು ತಮ್ಮ ಅಧಿಕಾರವನ್ನು ಬಳಸಿಕೊಂಡು ಅಧಿಕೃತ ರಾಜ್ಯ ಭಾಷೆಯನ್ನಾಗಿ ಮಾಡಲಿ ಎಂದರು.