Mangalore: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಕಾಮುಕನಿಗೆ ಮೂರು ವರ್ಷಗಳ ಸಾದಾ ಸಜೆ
Saturday, September 24, 2022
ಮಂಗಳೂರು: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿರುವ ಹಿನ್ನೆಲೆಯಲ್ಲಿ ಕಾಮುಕನಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ವಿಧಿಸಲಾಗಿದೆ.ಬೆಳ್ತಂಗಡಿ ತಾಲೂಕಿನ ಕೊಕ್ಕಡ ನಿವಾಸಿ ಪದ್ಮನಾಭ ಎಂಬಾತ ಶಿಕ್ಷೆಗೊಳಗಾದ ಅಪರಾಧಿ.
2019ರ ಆಗಸ್ಟ್ 17 ರಂದು ಅಪ್ರಾಪ್ತ ಬಾಲಕಿ ಶಾಲೆಯಿಂದ ಮನೆಗೆ ತೆರಳುತ್ತಿದ್ದ ವೇಳೆ ಆರೋಪಿ ಪದ್ಮನಾಭ ಬಾಲಕಿಯನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ ಆಕೆಯ ಕೈ ಹಿಡಿದು ಎಳೆದಿದ್ದ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಇನ್ಸ್‌ಪೆಕ್ಟರ್ ಎಲ್ ಚಂದ್ರಶೇಖರ ತನಿಖೆ ನಡೆಸಿ ಕೋರ್ಟ್ ಗೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣ ಕೈಗೆತ್ತಿಕೊಂಡು ವಿಚಾರಣೆ ನಡೆಸಿರುವ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ( ಪೊಕ್ಸೊ ) ಎಫ್‌ಟಿಎಸ್ - 1 ನ್ಯಾಯಾಲಯದ ನ್ಯಾಯಾಧೀಶೆ ಮಂಜುಳಾ ಇಟ್ಟಿ ಆರೋಪಿಗೆ ಪೊಕ್ಸೊ ಕಾಯ್ದೆಯ ಕಲಂ 12 ರಡಿ ಮೂರು ವರ್ಷ ಸಾದಾ ಸಜೆ ಮತ್ತು 500 ರೂಪಾಯಿ ದಂಡ , ಐಪಿಸಿ ಸೆಕ್ಷನ್ 354 ( ಡಿ ) ಪ್ರಕಾರ 3 ವರ್ಷ ಸಾದಾ ಸಜೆ ಮತ್ತು 500 ರೂ ದಂಡ ಹಾಗೂ ಐಪಿಸಿ 341 ರಂತೆ 1 ವರ್ಷ ಸಜೆ ವಿಧಿಸಿದ್ದಾರೆ. ಅಲ್ಲದೆ ನೊಂದ ಬಾಲಕಿಗೆ ಪರಿಹಾರ ನೀಡುವಂತೆಯೂ ಆದೇಶ ನೀಡಿದ್ದಾರೆ.ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕಿ ಸಹನಾದೇವಿ ವಾದಿಸಿದ್ದರು.