ಮಂಗಳೂರು: ನಾಡಪ್ರಭು ಕೆಂಪೇಗೌಡ ಕಂಚಿನ ಪ್ರತಿಮೆಯ ಪವಿತ್ರ ಮಣ್ಣು ಸಂಗ್ರಹ ಅಭಿಯಾನಕ್ಕೆ ಚಾಲನೆ mng
Wednesday, October 26, 2022
ಮಂಗಳೂರು: ಬೆಂಗಳೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ನಾಡಪ್ರಭು ಕೆಂಪೇಗೌಡ 108 ಅಡಿ ಎತ್ತರದ ಕಂಚಿನ ಪ್ರತಿಮೆಗೆ ಪವಿತ್ರ ಮಣ್ಣು ಸಂಗ್ರಹ ಅಭಿಯಾನಕ್ಕೆ ಇಂದು ಮಂಗಳೂರಿನ ಲೇಡಿಹಿಲ್ ಬಳಿಯಿರುವ ಮನಪಾ ಈಜುಕೊಳದ ಆವರಣದಲ್ಲಿ ಚಾಲನೆ ದೊರಕಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವ ಸುನಿಲ್ ಕುಮಾರ್, ಸುಸಜ್ಜಿತವಾದ ಪಟ್ಟಣ ಯಾವ ರೀತಿ ಇರಬೇಕೆಂಬ ಕಲ್ಪನೆಯಲ್ಲಿ ಕೆಂಪೇಗೌಡರು ಬೆಂಗಳೂರನ್ನು ನಿರ್ಮಾಣ ಮಾಡಿದರು. ಪ್ರಗತಿಯ ವೇಗದಲ್ಲಿ ಬೆಂಗಳೂರು ಇಂದು ನೂರುಪಟ್ಟು ಬೆಳೆದಿದೆ. ಆದರೆ ಇಡೀ ಬೆಂಗಳೂರು ನಿರ್ಮಾಣಕ್ಕೆ ಭದ್ರ ಅಡಿಪಾಯ ಹಾಕಿದವರು ನಾಡಪ್ರಭು ಕೆಂಪೇಗೌಡರು. ಹಲವಾರು ಆಳರಸರಿಂದ ಇಂದು ನಮ್ಮ ರಾಜ್ಯ ನಿರ್ಮಾಣವಾಗಿದೆ. ಆ ಎಲ್ಲಾ ರಾಜ ಮನೆತನಗಳಿಗೆ ಗೌರವ ಕೊಡುವಂತಹ ಕಾರ್ಯವನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಾಡುತ್ತಿದೆ. ಅದರ ಭಾಗವಾಗಿ ಬೆಂಗಳೂರಿನಲ್ಲಿ ಕೆಂಪೇಗೌಡರ 108 ಅಡಿ ಎತ್ತರದ ಭವ್ಯ ಕಂಚಿನ ಪ್ರತಿಮೆ ನಿರ್ಮಾಣಗೊಳ್ಳುತ್ತಿದೆ ಎಂದರು.
ಶ್ರೀ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಮಾತನಾಡಿ, ಇತಿಹಾಸದ ಪುಟಗಳನ್ನು ವಾಸ್ತವಿಕ ಆಧಾರದಲ್ಲಿ ಜನರಿಗೆ ನೀಡಬೇಕಾದ ಕಾರ್ಯ ಆಗಬೇಕಿದೆ. ಈವರೆಗೆ ನಾವು ತಿರುಚಿರುವ ಇತಿಹಾಸವನ್ನೇ ನಂಬಿದ್ದೆವು. ಆದರೆ ದೇಶಕ್ಕಾಗಿ ತ್ಯಾಗ ಮಾಡಿರುವವರ, ಸಾಧನೆಗೈದ ಮಹನೀಯರ ಸ್ಮರಿಸುವ ಕಾರ್ಯ ಆಗಬೇಕಿದೆ ಎಂದರು.
*ಕೆಂಪೇಗೌಡರ ಕಾರ್ಯಕ್ರಮದಲ್ಲಿ ಟಿಪ್ಪುವನ್ನು ಎಳೆದು ತಂದ ನಳಿನ್ ಕುಮಾರ್*
ಕೆಂಪೇಗೌಡರ ಕಂಚಿನ ಪ್ರತಿಮೆಯನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಿರ್ಮಿಸಬೇಕು, ವಿಮಾನ ನಿಲ್ದಾಣಕ್ಕೆ ಅವರ ಹೆಸರಿಡಬೇಕೆಂಬ ಸಂದರ್ಭ ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಬೇಕೆಂಬ ಚರ್ಚೆಗಳು ಕೇಳಿ ಬಂತು. ಆದರೆ ಕೆಂಪೇಗೌಡರ ಎದುರು ಯಾವ ಟಿಪ್ಪುವೂ ಅಲ್ಲ. ಬೆಂಗಳೂರು ಇಂದು ಜಗತ್ತಿನ ಅತ್ಯಂತ ಪ್ರಸಿದ್ಧ ನಗರವಾಗಿ ಬೆಳೆದಿದೆ ಎಂದರೆ ಅದಕ್ಕೆ ಕೆಂಪೇಗೌಡರ ಕೊಡುಗೆ ಅಪಾರವಿದೆ. ಇಡೀ ದೇಶದಲ್ಲಿ ಇಂದು ಬೆಂಗಳೂರು ಪ್ರಮುಖ ಐಟಿ ಕೇಂದ್ರವಾಗಿ ಬೆಳೆದಿರುವುದಕ್ಕೆ ಆ ಕಾಲಘಟ್ಟದಲ್ಲಿ ಅಭಿವೃದ್ಧಿಯ ಮಂತ್ರವನ್ನು ಕೊಟ್ಟವರು ಕೆಂಪೇಗೌಡರು.
ಆದರೆ ಟಿಪ್ಪುವಿನ ನಿರಂತರ ದಾಳಿಗಳ ಬಗ್ಗೆ ಮಂಗಳೂರು ಹಾಗೂ ಕೊಡಗುಗಳಲ್ಲಿ ಸ್ಪಷ್ಟ ಉಲ್ಲೇಖಗಳಿದೆ. ಆತನ ನೆತ್ತರಕೆರೆ ವಿಚಾರ, ಚರ್ಚ್ ಗಳ ಮೇಲಿನ ದಾಳಿ, ಮತಾಂತರ ಪ್ರಕ್ರಿಯೆಗಳು ಚರ್ಚೆಯಲ್ಲಿದೆ. ಆದರೆ ಕೆಂಪೇಗೌಡರು, ಒಡೆಯರ್ ಗಳ ವಿಚಾರದಲ್ಲಿ ಎಲ್ಲೂ ಚರ್ಚೆಗಳಿಲ್ಲ, ಸಂದೇಹಗಳಿಲ್ಲ. ಕೆಂಪೇಗೌಡರು ಸರ್ವ ಸಮಾಜ, ಸಮುದಾಯಗಳನ್ನು ಒಂದಾಗಿ ಬೆಂಗಳೂರನ್ನು ಕಟ್ಟಿದವರು. ಅಂತಹ ಶ್ರೇಷ್ಠ ಸಾಧಕರ ಸಾಧನೆಯ ಬಗ್ಗೆ ಶಾಶ್ವತವಾಗಿ ನೆನಪು ಮಾಡುವಂತಹ ಕಾರ್ಯವನ್ನು ಬಿಜೆಪಿ ಸರಕಾರ ಮಾಡಿದೆ ಎಂದರು.
ಕೆಂಪೇಗೌಡರು ಓರ್ವ ಸಾಧಕನಾಗಿ ಬೆಂಗಳೂರನ್ನು ಕಟ್ಟಿ ಬೆಳೆಸಿ ನಮ್ಮ ರಾಜ್ಯದ ಅಭಿವೃದ್ಧಿ ಪಥಕ್ಕೆ ಮುನ್ನುಡಿ ಬರೆದದವರು. ಅವರ ಪರಿಚಯ ಮುಂದಿನ ಪೀಳಿಗೆಗೆ ಆಗಬೇಕು, ಸಮಾಜಕ್ಕೆ ಅವರು ನೀಡಿರುವ ಕೊಡುಗೆಗಳು ಶಾಶ್ವತವಾಗಿ ಉಳಿಯಬೇಕೆಂಬ ಉದ್ದೇಶದಿಂದ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಿಜೆಪಿ ಸರಕಾರ ಕೆಂಪೇಗೌಡ ಥೀಮ್ ಪಾರ್ಕ್ ಹಾಗೂ ಭವ್ಯ ಪ್ರತಿಮೆಯನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ನಳಿನ್ ಕುಮಾರ್ ಹೇಳಿದರು.
ಈ ವೇಳೆ ಅ.26ರಿಂದ ನ.7ರವರೆಗೆ ರಾಜ್ಯಾದ್ಯಂತ ನಡೆಯಲಿರುವ ಮಣ್ಣು ಸಂಗ್ರಹ ಅಭಿಯಾನದ ಕೆಂಪೇಗೌಡ ರಥಕ್ಕೆ ಭವ್ಯ ಸ್ವಾಗತ ಕೋರಲಾಯಿತು. ಈ ರಥವು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸಿ ಅಲ್ಲಿನ ಮಣ್ಣನ್ನು ಕೊಂಡೊಯ್ದು ಬೆಂಗಳೂರಿನ ಕೆಂಪೇಗೌಡ ಥೀಮ್ ಪಾರ್ಕ್ ನಲ್ಲಿ ಹಾಕಲಾಗುತ್ತದೆ.