ಮಂಗಳೂರು: ಬಿಲ್ಲವ, ಈಡಿಗ ಸೇರಿದಂತೆ 26 ಪಂಗಡಗಳಿಂದ ರಾಜ್ಯ ಸರಕಾರದ ಬ್ರಹ್ಮಶ್ರೀ ನಾರಾಯಣ ಗುರು ಕೋಶ ತಿರಸ್ಕಾರ; ಪದ್ಮರಾಜ್ ಆರ್.
Tuesday, November 1, 2022
ಮಂಗಳೂರು: ರಾಜ್ಯ ಸರಕಾರ ಘೋಷಣೆ ಮಾಡಿರುವ ಬ್ರಹ್ಮಶ್ರೀ ನಾರಾಯಣಗುರು ಕೋಶವನ್ನು ಬಿಲ್ಲವ, ಈಡಿಗ ಸೇರಿದಂತೆ 26 ಒಳಪಂಗಡಗಳು ಸಾರಾಸಗಟಾಗಿ ತಿರಸ್ಕರಿಸಿದೆ. ನಮಗೆ ಕೋಶದ ಅಗತ್ಯವಿಲ್ಲ. ನಿಜವಾಗಿಯೂ ಸರಕಾರಕ್ಕೆ ಇಚ್ಛಾಶಕ್ತಿ ಇದ್ದಲ್ಲಿ ನಮ್ಮ ಸಮುದಾಯಕ್ಕೆ ಬ್ರಹ್ಮಶ್ರೀ ನಾರಾಯಣಗುರು ನಿಗಮ ನೀಡಲಿ ಎಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಆಗ್ರಹಿಸಿದರು.
ಶ್ರೀಕ್ಷೇತ್ರ ಕುದ್ರೋಳಿಯಲ್ಲಿಂದು ಬಿಲ್ಲವ ಸಮಾಜದ ಪ್ರಮುಖರ ಸಭೆಯ ಬಳಿಕ ಮಾತನಾಡಿದ ಅವರು, ಈ ಕೋಶ ಹಲ್ಲಿಲ್ಲದ ಹಾವು. ಇದಕ್ಕೊಂದು ಉನ್ನತ ಸ್ಥಾನದ ಅಧಿಕಾರಿಯನ್ನು ನೇಮಕ ಮಾಡಿದ್ದರೂ, ಅವರಿಗೆ ಸ್ವತಂತ್ರ ಅಧಿಕಾರ ಇರುವುದಿಲ್ಲ. ಯಾವುದೇ ತೀರ್ಮಾನ ತೆಗೆದುಕೊಳ್ಳಬೇಕಾದರೂ ಸರಕಾರದ ಕಾರ್ಯದರ್ಶಿಯ ಅನುಮತಿ ಬೇಕಾಗುತ್ತದೆ. ಅಲ್ಲದೆ ಈ ಕೋಶ ಒಂದು ಇಲಾಖೆಯ ಅಡಿಯಲ್ಲಿದ್ದು, ಯಾವಾಗ ಬೇಕಾದರೂ ಇದನ್ನು ವಾಪಸ್ ತೆಗೆದುಕೊಳ್ಳಬಹುದು ಎಂದರು.
ರಾಜ್ಯ ಸರಕಾರ ಬ್ರಹ್ಮಶ್ರೀ ನಾರಾಯಣ ಗುರು ಕೋಶ ಸ್ಥಾಪಿಸಿ ಸಮುದಾಯವನ್ನು ತಪ್ಪುದಾರಿಗೆ ಎಳೆಯುತ್ತಿದೆ. ನಿಗಮ ಹಾಗೂ ಕೋಶಕ್ಕೆ ಬಹಳಷ್ಟು ವ್ಯತ್ಯಾಸವಿದೆ. ನಿಗಮ ಸ್ವಾಯತ್ತತೆಯನ್ನು ಹೊಂದಿರುವ ಸಂಸ್ಥೆಯಾಗಿದ್ದು, ಸಮುದಾಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಶಕ್ತಿ ನಿಗಮಕ್ಕಿರುತ್ತದೆ. ಆದರೆ ಕೋಶದಿಂದ ಸಮುದಾಯದ ಯಾವ ಅಭಿವೃದ್ಧಿಯೂ ಆಗುವುದಿಲ್ಲ. ಇದಲ್ಲದೆ ಸರಕಾರ ಕೋಶ ಘೋಷಣೆ ಮಾಡಿದರೂ, ಎಷ್ಟು ಅನುದಾನ ಮೀಸಲಿಡಲಾಗಿದೆ ಎಂದು ಈವರೆಗೆ ಹೇಳಿಲ್ಲ. ಆದ್ದರಿಂದ ನಮ್ಮ ಬೇಡಿಕೆಗಳು ಈಡೇರದಿದ್ದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಹೋರಾಟ ತೀವ್ರವಾಗಲಿದೆ ಎಂದು ಪದ್ಮರಾಜ್ ಆರ್. ಎಚ್ಚರಿಸಿದರು.