ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆಗೆ ಒತ್ತಾಯಿಸಿ ಜ.29ರಂದು ಲಕ್ಷಕ್ಕೂ ಮಿಕ್ಕಿ ಜನ ಸೇರಿಸಿ ಬೃಹತ್ ಸಮಾವೇಶ
Tuesday, November 1, 2022
ಮಂಗಳೂರು: ಬಿಲ್ಲವ, ಈಡಿಗ, ನಾಮಧಾರಿ ಸೇರಿದಂತೆ 26 ಪಂಗಡಗಳ ಸಮಗ್ರ ಅಭಿವೃದ್ಧಿಗಾಗಿ ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪಿಸಬೇಕೆಂದು ಸರಕಾರವನ್ನು ಒತ್ತಾಯಿಸಿ ಸಮುದಾಯವು ಜನವರಿ 29ರಂದು ಮಂಗಳೂರಿನಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸುತ್ತಿದೆ ಎಂದು ಶ್ರೀ ನಾರಾಯಣ ಗುರು ಐಕ್ಯತಾ ವೇದಿಕೆ ರಾಜ್ಯ ಸಮಿತಿಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಹೇಳಿದರು.
ಕುದ್ರೋಳಿ ಶ್ರೀಕ್ಷೇತ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಈ ಸಮಾವೇಶದ ತಾತ್ಕಾಲಿಕ ಸಮಿತಿಯನ್ನು ರಚಿಸಲಾಗಿದೆ. ಸಮಾವೇಶದ ಸ್ಥಳ ಇನ್ನು ನಿಗದಿಯಾಗಬೇಕು. ಜನವರಿ 29ರಂದು ರಂದು ಮಧ್ಯಾಹ್ನ 3ಕ್ಕೆ ಮೆರವಣಿಗೆ ನಡೆದು ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಯವರ ಅಧ್ಯಕ್ಷತೆಯಲ್ಲಿ 4ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಕನಿಷ್ಠ 1ಲಕ್ಷಕ್ಕೂ ಅಧಿಕ ಮಂದಿ ಜನರು ಈ ಸಮಾವೇಶದಲ್ಲಿ ಸೇರಬೇಕೆಂಬ ಗುರಿ ಇರಿಸಲಾಗಿದೆ ಎಂದರು.
ಕನಿಷ್ಠ 500 ಕೋಟಿ ರೂ. ಅನುದಾನ ಮೀಸಲಿರಿಸಿ ಸಮಾಜಕ್ಕೆ ನಿಗಮ ಮಾಡಬೇಕು, ಕಾಂತರಾಜು ವರದಿ ಜಾರಿಯಾಗಲಿ, ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ - ಚೆನ್ನಯರ ಹೆಸರನ್ನಿಡಬೇಕೆಂಬ ಬೇಡಿಕೆಗಳನ್ನು ಮುಂದಿರಿಸಿ ಈ ಸಮಾವೇಶವನ್ನು ಆಯೋಜಿಸಲಾಗಿದೆ. ಸರಕಾರ ನಮ್ಮ ಸಮುದಾಯಕ್ಕೆ ಕೋಶ ಘೋಷಣೆ ಮಾಡಿ ಮತ್ತೆ ನಮಗೆ ಮಂಕುಬೂದಿ ಎರಚುವ ಕೆಲಸ ಮಾಡಿದೆ. ಹಿಂದುಳಿದ ವರ್ಗವು ಈ ರಾಜ್ಯದ ಜನಸಂಖ್ಯೆಯ 30-40 ಶೇಕಡಾ ಇದ್ದರೂ ಇಡೀ ಸಮುದಾಯಕ್ಕೆ ಸಿಕ್ಕಿರೋದು ಕೇವಲ 7 ಮಂದಿಗೆ ಮಂತ್ರಿ ಸ್ಥಾನ. ಸರ್ವರಿಗೂ ಸಮಪಾಲು ಸಮಬಾಳು ಎಂಬ ಆಧಾರದಲ್ಲೂ ಇನ್ನು ಮುಂದೆ ಯೋಚನೆ ಮಾಡಬೇಕಿದೆ. ಅದನ್ನೂ ಈ ಸಮಾವೇಶದಲ್ಲಿ ನಿರ್ಧಾರ ಮಾಡಲಾಗುತ್ತದೆ. ಸಮಾವೇಶಕ್ಕೆ ಮೊದಲೇ ನಿಗಮ ಘೋಷಣೆ ಆದಲ್ಲಿ ಖಂಡಿತಾ ವಿಜಯೋತ್ಸವ ಆಚರಣೆ ಮಾಡಲಾಗುತ್ತದೆ ಎಂದು ಸತ್ಯಜಿತ್ ಸುರತ್ಕಲ್ ಹೇಳಿದರು.
Video