ಕಾರ್‌ಸ್ಟ್ರೀಟ್‌ನ ಬಿಇಎಂ ಶಾಲೆಯ ಆವರಣದಲ್ಲಿ ಗೃಹಾಲಂಕಾರ ಗಿಡಗಳ ಪ್ರದರ್ಶನ ‘ಫ್ಲೋರಾ ಗಾರ್ಡನರ್ಸ್ ಫೇರ್’
Thursday, November 3, 2022
ಮಂಗಳೂರು: ಗೃಹಾಲಂಕಾರ ಗಿಡಗಳ ಪ್ರದರ್ಶನ ‘ಫ್ಲೋರಾ ಗಾರ್ಡನರ್ಸ್ ಫೇರ್’ ನ.೬ರಂದು ನಗರದ ಕಾರ್‌ಸ್ಟ್ರೀಟ್‌ನ ಖಾದಿ ಭಂಡಾರ ಮುಂಭಾಗದ ಬಿಇಎಂ ಶಾಲೆಯ ಆವರಣದಲ್ಲಿ ಏರ್ಪಡಿಸಲಾಗಿದೆ. ಕರಂಗಲ್ಪಾಡಿಯ ಸಸ್ಯಕಾಶಿ ಖ್ಯಾತಿಯ ಲಿಲ್ಲಿ ಪಿಂಟೊ ಮತ್ತು ಸಂಗಡಿಗರ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಂದು ಬೆಳಗ್ಗೆ ೯ರಿಂದ ಸಂಜೆ ೬ ಗಂಟೆವರೆಗೆ ಈ ಪ್ರದರ್ಶನ ನಡೆಯಲಿದ್ದು, ೫೦ಕ್ಕೂ ಅಕ ಸ್ಟಾಲ್‌ಗಳಲ್ಲಿ ಗೃಹಾಲಂಕಾರ ಗಿಡಗಳ ಜತೆಗೆ ಗೃಹಾಲಂಕಾರಕ್ಕೆ ಬೇಕಾಗುವ, ಗಿಡಗಳ ಪೋಷಣೆಗೆ ಬೇಕಿರುವ ಎಲ್ಲ ಸಾಮಗ್ರಿಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಕಾರ್ಯಕ್ರಮದ ಆಯೋಜಕಿ ಲಿಲ್ಲಿ ಪಿಂಟೊ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕುಂಡಗಳಲ್ಲಿ ಬೆಳೆಸುವ ವಿವಿಧ ಬಗೆಯ ಅಲಂಕಾರಿಕ ಹಾಗೂ ಹೂವಿನ ಗಿಡಗಳು, ಗಿಡಮೂಲಿಕೆಗಳು, ಕುಂಡಗಳು, ಸಾವಯವ ಗೊಬ್ಬರ, ಗಾರ್ಡನ್ ಪರಿಕರಗಳು, ಸೋಲಾರ್ ವಾಟರ್ ಹಾರ್ವೆಸ್ಟಿಂಗ್, ಸಲಕರಣೆಗಳು, ಏಣಿಗಳು, ಗಿಡಮೂಲಿಕೆಗಳ ಉತ್ಪನ್ನಗಳು, ಕೈ ಮಗ್ಗದ ಬಟ್ಟೆಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಇದೆ. ಮನೆಯಲ್ಲೇ ತಯಾರಿಸಿದ ಆಹಾರ ಉತ್ಪನ್ನಗಳು, ತುಪ್ಪ, ಜೇನುತುಪ್ಪ ಕೂಡ ಪ್ರದರ್ಶನದಲ್ಲಿರುತ್ತವೆ. ಪ್ರದರ್ಶನಕ್ಕೆ ಪ್ರವೇಶ ಉಚಿತ ಎಂದರು.
ಜ್ಯೂಲಿಯೆಟ್ ಮಸ್ಕರೇನಸ್, ರೊನಾಲ್ಡ್, ಕಾಮಾಕ್ಷಿ ವಾಮನ್, ಬಿ.ಡಿ. ತಿಮ್ಮಯ್ಯ ಉಪಸ್ಥಿತರಿದ್ದರು.