Mangalore: ಸರಕಾರದ ವೈಫಲ್ಯತೆ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ದಾರಿ ಮಾಡಿಕೊಟ್ಟಿದೆ; ಜೆ ಆರ್ ಲೋಬೋ
Tuesday, November 29, 2022
ಮಂಗಳೂರು: ಉಗ್ರ ಪರ ಗೋಡೆ ಬರಹ ಬರೆದಾಗಲೇ ಸಕಾಲದಲ್ಲಿ ಸರಕಾರವಾಗಲೀ, ಪೊಲೀಸ್ ಇಲಾಖೆಯಾಗಲಿ ಎಚ್ಚೆತ್ತುಕೊಂಡಿದ್ದರೆ ಇಂದು ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣ ನಡೆಯುತ್ತಿರಲಿಲ್ಲ. ಇದು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರಕಾರದ ಕಾನೂನು ಆಡಳಿತ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ ಎಂದು ಮಾಜಿ ಶಾಸಕ ಜೆ.ಆರ್.ಲೋಬೊ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ನಮೀಬಿಯಾ ಗರ್ಭಿಣಿ ಚೀತಾ ಎಂದು ಎಡಿಟ್ ಮಾಡಿದ ಫೋಟೋ ಪೋಸ್ಟ್ ಮಾಡಿದವರ ಮೇಲೆ ಒಂದು ದಿನದೊಳಗೆ ಪ್ರಕರಣ ದಾಖಲಿಸುವ ವ್ಯವಸ್ಥೆ ಆಗುತ್ತದೆ. ಆದರೆ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದಲ್ಲಿ ಕಮಿಷನರ್ ಹೇಳಿಕೆ ನೀಡದಿದ್ದರೂ, ಊಹಾಪೋಹ ಸುದ್ದಿಗಳನ್ನು ಬಿತ್ತರಿಸಿ ಜನರಲ್ಲಿ ಗೊಂದಲ ಸೃಷ್ಟಿಸುವವರ ಮೇಲೆಯೂ ಯಾವ ಕ್ರಮವನ್ನು ಸರಕಾರ ಕೈಗೊಂಡಿಲ್ಲ. ಆದ್ದರಿಂದ ಸಕಾಲದಲ್ಲಿ ಸರಕಾರ ಸರಿಯಾದ ಆಡಳಿತ ಮಾಡಿದ್ದಲ್ಲಿ ಇಂತಹ ಅವ್ಯವಸ್ಥೆ ಆಗುತ್ತಿತ್ತೇ ಎಂದು ಆಗ್ರಹಿಸಿದರು.
ಆಡಳಿತ ನಡೆಸುತ್ತಿರುವ ಸರಕಾರದ ಸಂಪೂರ್ಣ ವೈಫಲ್ಯತೆಯಿಂದ ನಾಗರಿಕರಿಗೆ ಯಾರ ಮೇಲೆ ನಂಬಿಕೆಯಿ ಇಡುವುದು ಎಂಬ ಗೊಂದಲವನ್ನು ಸೃಷ್ಟಿಸಿದೆ. ಚುನಾವಣೆ ಹತ್ತಿರ ಬರುವ ವೇಳೆ ಇಂತಹ ಗೊಂದಲಗಳನ್ನು ಸೃಷ್ಟಿ ಮಾಡುತ್ತಿದ್ದಾರೆ. ಆದ್ದರಿಂದ ನಾಗರಿಕರು ಮಾಧ್ಯಮಗಳ, ಫೇಸ್ ಬುಕ್, ವಾಟ್ಸ್ಆ್ಯಪ್ ಗಳ ಸುಳ್ಳು ಮಾಹಿತಿಗಳನ್ನು ನಂಬಬೇಡಿ. ದ.ಕ.ಜಿಲ್ಲೆಯ ಹೆಸರು ಕೆಡುತ್ತಿದ್ದು, ಜಿಲ್ಲೆಗೆ ಯಾವುದೇ ಹೂಡಿಕೆದಾರರು ಬರುತ್ತಿಲ್ಲ. ರಾಜಕೀಯ ಹುನ್ನಾರಕ್ಕೆ ಯಾರೂ ಬಲಿಯಾಗದಿರಿ. ಆದ್ದರಿಂದ ಜನತೆ ದಯವಿಟ್ಟು ಎಚ್ಚೆತ್ತುಕೊಳ್ಳಬೇಕಿದೆ ಎಂದು ಜೆ.ಆರ್.ಲೋಬೊ ಮನವಿ ಮಾಡಿದರು.