ಇಹಲೋಕ ತ್ಯಜಿಸಿದ ಕುಂಬ್ಳೆ ಸುಂದರ್ ರಾವ್; ಯಕ್ಷಗಾನ ಕ್ಷೇತ್ರದ ದಿಗ್ಗಜ, ಮಾಜಿ ಶಾಸಕ ಇನ್ನು ನೆನಪು ಮಾತ್ರ

ಇಹಲೋಕ ತ್ಯಜಿಸಿದ ಕುಂಬ್ಳೆ ಸುಂದರ್ ರಾವ್; ಯಕ್ಷಗಾನ ಕ್ಷೇತ್ರದ ದಿಗ್ಗಜ, ಮಾಜಿ ಶಾಸಕ ಇನ್ನು ನೆನಪು ಮಾತ್ರ

ಯಕ್ಷರಂಗದ ಹಿರಿಯ ಕಲಾವಿದ, ಶಾಸಕ, ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿ ಮಾಜಿ ಅಧ್ಯಕ್ಷ ಕುಂಬಳೆ ಸುಂದರ್ ರಾವ್(88) ನ.30ರ ಮುಂಜಾನೆ ನಿಧನ ಹೊಂದಿದ್ದಾರೆ.

ಯಕ್ಷಗಾನದಲ್ಲಿ ಯಾವುದೇ  ಪಾತ್ರಗಳನ್ನು ಲೀಲಾಜಾಲವಾಗಿ ಮಾಡುತ್ತಿದ್ದ ಅವರಿಗೆ ಪಾದುಕಾ ಪಟ್ಟಾಭಿಷೇಕದ ಭರತ, ವಿರಾಟ ಪರ್ವದ ಉತ್ತರ ಕುಮಾರ, ಕೃಷ್ಣ ಸಂಧಾನದ ಕೃಷ್ಣ, ದಕ್ಷಯಜ್ಞದ ಈಶ್ವರ, ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಗೋವಿಂದ ದೀಕ್ಷಿತ, ತ್ರಿಪುರ ಮಥನದ ಚಾರ್ವಾಕ ಮುಂತಾದ ಪಾತ್ರಗಳು ಬಹಳಷ್ಟು ಪ್ರಸಿದ್ಧಿಯನ್ನು ತಂದುಕೊಟ್ಟಿದ್ದವು. ಪ್ರಾಸಬದ್ದ ಮಾತುಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿದ್ದ ರಾಯರು ಭಕ್ತಿ, ಕರುಣಾರಸದ ಪಾತ್ರಗಳನ್ನು ಹೆಚ್ಚು ಸೊಗಸಾಗಿ ಚಿತ್ರಿಸುತ್ತಿದ್ದರು.

 ಕಾಸರಗೋಡು ಸಮೀಪದ ಕುಂಬಳೆಯಲ್ಲಿ ಜನಿಸಿದ ಅವರು ಚಿಕ್ಕಂದಿನಲ್ಲಿಯೇ ಯಕ್ಷಗಾನದ ತೀವ್ರ ಆಸಕ್ತಿ ಬೆಳೆಸಿಕೊಂಡಿದ್ದರು. ಕೂಡ್ಲು, ಕುಂಡಾವು, ಸುರತ್ಕಲ್, ಧರ್ಮಸ್ಥಳ, ಇರಾ ಯಕ್ಷಗಾನ ಮೇಳಗಳಲ್ಲಿ ಕಲಾವಿದರಾಗಿ ಮಿಂಚಿದರು. ಶೇಣಿ ಗೋಪಾಕೃಷ್ಣ ಭಟ್‌, ಮಲ್ಪೆ ರಾಮದಾಸ ಸಾಮಗ ಮುಂತಾದ ಹಿರಿಯ ಮೇರು ಕಲಾವಿದರ ಜೊತೆ  ಮುಂತಾದವರ ಜತೆ ತಾಳಮದ್ದಳೆಯಲ್ಲಿ ವೇದಿಕೆ ಹಂಚಿಕೊಂಡವರು . ರಾಜಕೀಯ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಸಂಘಟನಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡ ಅವರು ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷರಾಗಿ ಒಂದು ಅವಧಿಗೆ ಕಾರ್ಯ ನಿರ್ವಹಿಸಿದರು.

ಬಿಜೆಪಿಯಿಂದ ಟಿಕೆಟ್‌ ಪಡೆದು ಮಂಗಳೂರು ಉತ್ತರ(ಸುರತ್ಕಲ್‌) ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ಬಂದು 1994ರಿಂದ 1999 ರವರೆಗೆ ಶಾಸಕರಾಗಿ ಸೇವೆ ಸಲ್ಲಿಸಿದರು.  ಮಂಗಳೂರು ವಿಶ್ವವಿದ್ಯಾನಿಲಯದ ಪಿ.ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದಿಂದ 2018-2019ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ.

ಸುಂದರ ರಾವ್‌ ನಿಧನಕ್ಕೆ ಯಕ್ಷಗಾನ ವಲಯ ಸೇರಿದಂತೆ ಹಲವು ಗಣ್ಯರು  ಶೋಕ ವ್ಯಕ್ತಪಡಿಸಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ನಾಳೆ ನೆರವೇರಲಿದ್ದು ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಮಂಗಳೂರು ಪಂಪ್‌ವೆಲ್ ಬಳಿ ಇರುವ ಅವರ ನಿವಾಸದಲ್ಲಿ ಅವಕಾಶ ಕಲ್ಪಿಸಲಾಗಿದೆ.

Ads on article

Advertise in articles 1

advertising articles 2

Advertise under the article