Mangalore: ಆಟೋರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣ; ಶಂಕಿತ ಉಗ್ರನ ಟಾರ್ಗೆಟ್ ಕದ್ರಿ ದೇವಸ್ಥಾನ ಆಗಿತ್ತಾ!?
Thursday, November 24, 2022
ಮಂಗಳೂರು: ನಗರದಲ್ಲಿ ನವಂಬರ್ 19ರಂದು ನಡೆದ ಆಟೋರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣಕ್ಕೆ ಟಾರ್ಗೆಟ್ ಮಂಗಳೂರಿನ ಅತೀ ಪುರಾತನ ದೇವಾಲಯ ಶ್ರೀ ಕ್ಷೇತ್ರ ಕದ್ರಿ ಆಗಿತ್ತೆಂದು ಉಗ್ರ ಸಂಘಟನೆಯೊಂದು ಒಪ್ಪಿಕೊಂಡಿದೆ ಎಂಬ ವಿಚಾರವೊಂದು ಬಾರೀ ಸದ್ದು ಮಾಡುತ್ತಿದೆ.
ಕದ್ರಿ ಶ್ರೀ ಮಂಜುನಾಥ ಕ್ಷೇತ್ರ ಸಾವಿರಾರು ವರ್ಷಗಳ ಇತಿಹಾಸವುಳ್ಳ ಮಂಗಳೂರಿನ ಅತ್ಯಂತ ಪುರಾತನ ದೇವಸ್ಥಾನ. ಈ ಕ್ಷೇತ್ರಕ್ಕೂ ಉತ್ತರ ಪ್ರದೇಶದ ನಾಥಪಂಥಕ್ಕೂ ಅವಿನಾಭಾವ ಸಂಬಂಧವಿದೆ. ಇದೀಗ ಈ ಕ್ಷೇತ್ರವನ್ನೇ ಟಾರ್ಗೆಟ್ ಮಾಡಿದ್ದೇವೆ ಎಂದು ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಎಂಬ ಭಯೋತ್ಪಾದಕ ಸಂಘಟನೆ ಹೊಣೆ ಹೊತ್ತಿದೆ ಎಂಬ ಪೋಸ್ಟರ್ ವೈರಲ್ ಆಗಿದೆ. ನಮ್ಮ ದಾಳಿ ಕದ್ರಿ ದೇವಾಲಯ ಆಗಿತ್ತು. ಆದರೆ ಉದ್ದೇಶಿತ ಗುರಿಯನ್ನು ತಲುಪುವ ಮೊದಲೇ ಬಾಂಬ್ ಸ್ಫೋಟಗೊಂಡಿದೆ ಉಗ್ರ ಸಂಘಟನೆ ಡಾರ್ಕ್ ವೆಬ್ ನಲ್ಲಿ ಹೇಳಿಕೊಂಡಿದೆ ಎಂಬ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇಂದು ಬೆಳಗ್ಗೆ ಕದ್ರಿ ದೇವಸ್ಥಾನಕ್ಕೆ ನಗರ ಸಶಸ್ತ್ರ ಮೀಸಲು ಪಡೆ ದೇವಸ್ಥಾನದ ಆವರಣದಲ್ಲಿ ತಪಾಸಣೆ ನಡೆಸಿದೆ. ಆದರೆ ಕೇಂದ್ರ ಹಾಗೂ ರಾಜ್ಯ ತನಿಖಾ ಸಂಸ್ಥೆಯು ಈ ಸುದ್ದಿ ನಿಖರವೆಂದು ಇನ್ನೂ ಅಧಿಕೃತವಾಗಿ ಹೇಳಿಲ್ಲ. ಅಲ್ಲದೆ ಕದ್ರಿ ದೇವಸ್ಥಾನದಲ್ಲಿ ಯಾವುದೇ ಪೊಲೀಸ್ ಭದ್ರತೆ ನಿಯೋಜನೆ ಮಾಡಿಲ್ಲ. ಈ ವಿಚಾರವಾಗಿ ತನಿಖಾ ಸಂಸ್ಥೆಯು ಮಾಹಿತಿ ನೀಡಿದ ಬಳಿಕವಷ್ಟೇ ಸತ್ಯಾಸತ್ಯತೆ ಬಯಲಿಗೆ ಬರಲಿದೆ.