ಮಂಗಳೂರು: ಕೃಷ್ಣಾಪುರ ವ್ಯಕ್ತಿ ಹತ್ಯೆ ಪ್ರಕರಣ 4 ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ
Saturday, December 24, 2022
ಮಂಗಳೂರು: ನಗರದ ಸುರತ್ಕಲ್ ಸಮೀಪದ ಕೃಷ್ಣಾಪುರದಲ್ಲಿ ನಿನ್ನೆ ರಾತ್ರಿ ವ್ಯಕ್ತಿಯೊಬ್ಬರ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ದೃಷ್ಟಿಯಿಂದ ಸುರತ್ಕಲ್ ಸುತ್ತಮುತ್ತಲಿನ 4 ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಸುರತ್ಕಲ್, ಬಜಪೆ, ಕಾವೂರು ಹಾಗೂ ಪಣಂಬೂರು ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.
ನಿನ್ನೆ ರಾತ್ರಿ ಕೃಷ್ಣಾಪುರ ನಾಲ್ಕನೇ ಬ್ಲಾಕ್ ನ ಅಂಗಡಿಗೆ ನುಗ್ಗಿದ ದುಷ್ಕರ್ಮಿಗಳಿಬ್ಬರು ಅಂಗಡಿ ಮಾಲಕ ಜಲೀಲ್ ಎಂಬುವರನ್ನು ಚೂರಿಯಿಂದ ಇರಿದು ಹತ್ಯೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 6ರಿಂದ ಡಿಸೆಂಬರ್ 27ರ ಬೆಳಿಗ್ಗೆ 6 ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ನಿಷೇಧಾಜ್ಞೆ ಸರಕಾರದಿಂದ ಮತ್ತು ಸರಕಾರದ ಆದೇಶದಂತೆ ನಡೆಸಲ್ಪಡುವ ಯಾವುದೇ ಕಾರ್ಯಕ್ರಮ, ಸಭೆ ಸಮಾರಂಭಗಳಿಗೆ ಅನ್ವಯಿಸುವುದಿಲ್ಲ. ಅಲ್ಲದೆ ಕ್ರಿಸ್ಮಸ್ ಆಚರಣೆ, ಧಾರ್ಮಿಕ ಕಾರ್ಯಕ್ರಮ ಮತ್ತು ಅಗತ್ಯ ತುರ್ತು ಸೇವೆಗಳಿಗೆ ಅನ್ವಯಿಸುವುದಿಲ್ಲ ಎಂದು ತಿಳಿಸಲಾಗಿದೆ.
ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಸುರತ್ಕಲ್, ಬಜಪೆ, ಕಾವೂರು ಮತ್ತು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಅಲ್ಲದೆ ಸುರತ್ಕಲ್, ಬಜಪೆ, ಕಾವೂರು, ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಕೈಗಾರಿಕಾ ಸಂಸ್ಥೆಗಳು ಕೆಲಸದ ಪಾಳಿಯನ್ನು ಡಿ.25 ಹಾಗೂ ಡಿ.26ರಂದು ಸಂಜೆ 6 ಗಂಟೆವರೆಗೆ ಮಾಡುವಂತೆ ಸೂಚಿಸಲಾಗಿದೆ. ಸಂಜೆ 6 ರಿಂದ ಬೆಳಗ್ಗೆ 6 ಗಂಟೆವರೆಗೆ ಸಿಬ್ಬಂದಿ ಹೊರಗಡೆ ಓಡಾಡದಂತೆ ಸೂಚಿಸಲಾಗಿದೆ.