ಮಂಗಳೂರು: ನ್ಯೂ ಈಯರ್ ಪಾರ್ಟಿ ಮೇಲೆ ಬಜರಂಗದಳದ ಕೆಂಗಣ್ಣು
Wednesday, December 21, 2022
ಮಂಗಳೂರು: ಇನ್ನು ಕೆಲವೇ ದಿನಗಳಲ್ಲಿ ಹೊಸ ವರ್ಷ ಆಗಮಿಸುತ್ತಿದೆ. ಪಬ್, ಕ್ಲಬ್, ಹೊಟೇಲ್ ಗಳಲ್ಲಿ ಹೊಸ ವರ್ಷ ಸಂಭ್ರಮಾಚರಣೆ ಪಾರ್ಟಿಗಳ ಆಯೋಜನೆ ಜೋರಾಗಿ ನಡೆಯುತ್ತಿದೆ. ಆದರೆ ಇದೀಗ ನ್ಯೂ ಈಯರ್ ಪಾರ್ಟಿಗಳ ಮೇಲೆ ಬಜರಂಗದಳದ ಕೆಂಗಣ್ಣು ನೆಟ್ಟಿದೆ.
ಡಿಸೆಂಬರ್ 31ರಂದು ನಡೆಯುವ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಬಿಂಬಿಸುವ ಪಾರ್ಟಿಗಳಿಗೆ ಬಜರಂಗದಳ ಭಾರೀಪ ವಿರೋಧ ವ್ಯಕ್ತಪಡಿಸಿದೆ. ಈಗಾಗಲೇ ಪಾರ್ಟಿಗಳನ್ನು ರಾತ್ರಿ 11ರೊಳಗೆ ಮುಗಿಸುವಂತೆ ಬಜರಂಗದಳ ಪೊಲೀಸ್ ಕಮಿಷನರ್ ಅವರಿಗೆ ಮನವಿ ಮಾಡಿದೆ. ಇಲ್ಲದಿದ್ದಲ್ಲಿ ಬಜರಂಗದಳದ ಕಾರ್ಯಕರ್ತರೇ ಪಾರ್ಟಿಗಳನ್ನು ಬಂದ್ ಮಾಡಿಸುತ್ತದೆ ಎಂದು ಬಜರಂಗದಳ ಎಚ್ಚರಿಕೆ ನೀಡಿದೆ.
ಬಜರಂಗದಳದ ಮುಖಂಡ ಪುನೀತ್ ಅತ್ತಾವರ ಮಾತನಾಡಿ, ಸಂಭ್ರಮಾಚರಣೆ ನೆಪದಲ್ಲಿ ಹೊಟೇಲ್, ಪಬ್ ಗಳಲ್ಲಿ ಲವ್ ಜಿಹಾದ್, ಡ್ರಗ್ಸ್ ಜಿಹಾದ್ ನಡೆಯುತ್ತಿದೆ. ಈ ಮೂಲಕ ದುಶ್ಚಟಗಳಿಗೆ ಪ್ರೇರಣೆ ನೀಡುವ ಘಟನೆಗಳು ನಡೆಯುತ್ತಿದೆ. ಇಸ್ಲಾಂ ಧರ್ಮವನ್ನು ಪಾಲಿಸುವ ಮುಸಲ್ಮಾನ ಯುವಕರು ಅವರ ಜಮಾಅತ್ ಅನ್ನು ಮಾತ್ರ ಒಪ್ಪುತ್ತಾರೆ. ಇಸ್ಲಾಂ ಪ್ರಕಾರ ಅವರಿಗೆ ಪಾರ್ಟಿಗಳು, ಸಂಗೀತ ನಿಷಿದ್ಧ. ಆದರೆ ಮಂಗಳೂರಿನ ಎಲ್ಲಾ ಪಬ್ ಗಳಲ್ಲಿ ಮುಸಲ್ಮಾನ ಯುವಕರು ಕಾಣಸಿಗುತ್ತಾರೆ. ಆದ್ದರಿಂದ ಎಲ್ಲಾ ಪಬ್, ಹೊಟೇಲ್ ಮಾಲಕರು ಯಾವುದೇ ಹೊಸ ವರ್ಷಾಚರಣೆಯ ಪಾರ್ಟಿಗಳಿಗೆ ಮುಸಲ್ಮಾನ ಯುವಕರಿಗೆ ಅವಕಾಶ ನೀಡದಂತೆ ಆಗ್ರಹಿಸಿದರು.
ಈ ಬಗ್ಗೆ ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಪ್ರತಿಕ್ರಿಯೆ ನೀಡಿ, ಈ ರೀತಿ ಎಚ್ಚರಿಕೆ ನೀಡಲು ಬಜರಂಗದಳದವರು ಯಾರು?. ದ.ಕ.ಜಿಲ್ಲೆಯಲ್ಲಿ ಸರಕಾರ ಇಲ್ಲ. ಕಾನೂನು ಸುವ್ಯವಸ್ಥೆ ಇಲ್ಲ. ಪೊಲೀಸ್ ಇಲ್ಲ ಅನ್ನುವಂಥದ್ದೇ ಇದರ ಹಿಂದಿರುವ ಅರ್ಥ. ಪೊಲೀಸ್ ಇಲಾಖೆ ನ್ಯೂ ಈಯರ್ ಪಾರ್ಟಿಯ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿ. ಸಂವಿಧಾನ ಎಲ್ಲರಿಗೂ ಅವರದ್ದೇ ಆದ ಸ್ವಾತಂತ್ರ್ಯ ನೀಡಿದೆ. ಸಂವಿಧಾನ ನೀಡಿರುವ ಸ್ವಾತಂತ್ರ್ಯ ಹಾಗೂ ಹಕ್ಕನ್ನು ಕಾಪಾಡುವುದು ಪೊಲೀಸ್ ಇಲಾಖೆಯ ಜವಾಬ್ದಾರಿ. ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸುವಂತಹ ಹೇಳಿಕೆ ನೀಡುವ ಬಜರಂಗದಳದವರ ಮೇಲೆ ಪ್ರಕರಣ ದಾಖಲು ಮಾಡಿ ಮುಂಜಾಗ್ರತಾ ಕ್ರಮವಾಗಿ ಬಂಧಿಸಲಿ ಎಂದು ಹೇಳಿದರು.