ಮಂಗಳೂರು: ಜಲೀಲ್ ಹತ್ಯೆ ಪ್ರಕರಣದ ಆರೋಪಿಗಳ ಪತ್ತೆಗೆ 8 ಅಧಿಕಾರಿಗಳಿರುವ ತಂಡ ರಚನೆ
Sunday, December 25, 2022
ಮಂಗಳೂರು: ನಗರದ ಕಾಟಿಪಳ್ಳ ನಿವಾಸಿ ಜಲೀಲ್ ಹತ್ಯೆ ಪ್ರಕರಣದ ಆರೋಪಿಗಳ ಪತ್ತೆಗೆ 8 ಅಧಿಕಾರಿಗಳಿರುವ ತಂಡ ರಚಿಸಲಾಗಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್ ಹೇಳಿದರು.
ಜಲೀಲ್ ಹತ್ಯೆಗೆ ಸಂಬಂಧಿಸಿದಂತೆ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದ್ದು, ಹತ್ಯೆ ಮಾಡಿರುವ ನೈಜ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುತ್ತದೆ. ಆದ್ದರಿಂದ ಸಾರ್ವಜನಿಕರು ಯಾವುದೇ ಊಹಾಪೋಹಗಳಿಗೆ ಕಿವಿಕೊಡಬಾರದು ಎಂದು ಹೇಳಿದರು.
ಜಲೀಲ್ ಕೊಲೆ ಆರೋಪಿಗಳ ಶೀಘ್ರ ಬಂಧನಕ್ಕೆ ಆಕ್ರೋಶಿತ ಗುಂಪು ಜಲೀಲ್ ಮನೆ ಬಳಿ ಮೃತದೇಹವನ್ನು ಇಟ್ಟು ಕೊಂಚ ಕಾಲ ಪ್ರತಿಭಟನೆ ನಡೆಸಿದೆ. ಅವರು ಆರೋಪಿಗಳ ಬಂಧನಕ್ಕೆ 24 ಗಂಟೆಯೊಳಗೆ ಬಂಧಿಸುವ ಗಡುವು ನೀಡಿದ್ದಾರೆ. ಸಾರ್ವಜನಿಕರ ಮನವೊಲಿಸಿ ಜಲೀಲ್ ಮೃತದೇಹವನ್ನು ದಫನಕ್ಕಾಗಿ ಮಸೀದಿಗೆ ಕಳುಹಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಈಗಾಗಲೇ 4 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಯಲ್ಲಿದೆ. ಕ್ರಿಸ್ ಮಸ್ ಇರುವುದರಿಂದ ಪೂರ್ವನಿಯೋಜಿತ ಕಾರ್ಯಕ್ರಮಗಳಿಗೆ ವಿನಾಯತಿ ನೀಡಲಾಗಿದೆ. ಆದರೆ ಎರಡು ದಿನಗಳ ಕಾಲ ಸುರತ್ಕಲ್ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ಎನ್.ಶಶಿಕುಮಾರ್ ಹೇಳಿದರು.