ಮಂಗಳೂರು: ಹತ್ಯೆಯಾದ ಜಲೀಲ್ ಮೃತದೇಹದ ಅಂತಿಮ ದರ್ಶನಕ್ಕೆ ಸೇರಿದ ಭಾರೀ ಜನಸ್ತೋಮ
Saturday, December 24, 2022
ಮಂಗಳೂರು: ನಗರದ ಸುರತ್ಕಲ್ ಬಳಿಯ ಕೃಷ್ಣಾಪುರದ 4ನೇ ಬ್ಲಾಕ್ ನಲ್ಲಿ ದಿನಸಿ ಅಂಗಡಿಯಲ್ಲಿ ದುಷ್ಕರ್ಮಿಗಳ ದಾಳಿಯಿಂದ ಹತ್ಯೆಗೀಡಾದ ಜಲೀಲ್ ಮೃತದೇಹ ಅವರ ಮನೆಗೆ ರವಾನೆಯಾಗಿದೆ. ಅವರ ಮೃತದೇಹದ ಅಂತಿಮ ದರ್ಶನಕ್ಕೆ ಭಾರೀ ಜನಸ್ತೋಮ ಸೇರಿದೆ.
ನಗರದ ಎ.ಜೆ. ಆಸ್ಪತ್ರೆಯ ಶವಾಗಾರದಿಂದ ಅವರ ಮೃತದೇಹ ಕೃಷ್ಣಾಪುರದ 9ನೇ ಬ್ಲಾಕ್ ನಲ್ಲಿರುವ ಅವರ ಮನೆಗೆ ರವಾನೆಯಾಗಿದೆ. ಈ ವೇಳೆಗಾಗಲೇ ಮನೆಯ ಬಳಿ ಭಾರೀ ಜನಸ್ತೋಮ ಸೇರಿದೆ. ಮನೆಯ ಸುತ್ತಮುತ್ತಲೂ ಪೊಲೀಸ್ ಬಿಗಿಬಂದೋಬಸ್ತು ವ್ಯವಸ್ಥೆ ಮಾಡಲಾಗಿದೆ. ಅಂತಿಮ ದರ್ಶನದ ಬಳಿಕ ಅವರ ಮೃತಹೇಹದ ಅಂತ್ಯಕ್ರಿಯೆ ಪಂಜಿಮೊಗರಿನ ಮಸೀದಿಯಲ್ಲಿ ನಡೆಯಲಿದೆ.
ಜಲೀಲ್ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಘಟನೆ ನಡೆದ ಕಾಟಿಪಳ್ಳದಲ್ಲಿ ಬಿಗುವಿನ ವಾತಾವರಣವಿದೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಸುರತ್ಕಲ್ ವ್ಯಾಪ್ತಿಯಲ್ಲಿ ಪೊಲೀಸ್ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿದ್ದು, ಮುನ್ನೂರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ. ಹೆಚ್ಚುವರಿಯಾಗಿ ಕೆಎಸ್ ಆರ್ ಪಿ ಸಿಬ್ಬಂದಿ ಸ್ಥಳದಲ್ಲಿ ಬೀಡುತ್ತಿದ್ದಾರೆ. ಸುರತ್ಕಲ್ , ಕಾಟಿಪಳ್ಳ, ಕೃಷ್ಣಾಪುರದ ಎಲ್ಲಾ ವ್ಯವಹಾರ ಸ್ಥಗಿತಗೊಂಡಿದ್ದು, ಅಂಗಡಿ ಮುಂಗಟ್ಟುಗಳು ಬಂದ್ ಆಗಿದೆ. ಬಸ್ ಸಂಚಾರವೂ ಸ್ಥಗಿತವಾದ ಹಿನ್ನೆಲೆ ಜನರು ಪರದಾಡುವಂತಾಗಿದೆ.