ಜ್ಯೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಮಾಡೆಲ್ ಅವಿವಾ ಬಿದ್ದಪ್ಪ ಜೊತೆ ನಿಶ್ಚಿತಾರ್ಥ
Sunday, December 11, 2022
ಜ್ಯೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಮಾಡೆಲ್ ಅವಿವಾ ಬಿದ್ದಪ್ಪ ಜೊತೆ ನಿಶ್ಚಿತಾರ್ಥ ಕಾರ್ಯಕ್ರಮ ಬೆಂಗಳೂರಿನ ಖಾಸಗಿ ಹೊಟೆಲ್ ನಲ್ಲಿ ಅದ್ಧೂರಿಯಾಗಿ ನಡೆಯಿತು.
ಆಪ್ತ ವಲಯದ ಸಮ್ಮುಖದಲ್ಲಿ ಎಂಗೇಜ್ಮೆಂಟ್ ನಡೆದಿದ್ದು, ನಟಿ, ಸಂಸದೆ ಸುಮಲತಾ ಅಂಬರೀಶ್, ನಟ ದರ್ಶನ್, ರಾಕಿಂಗ್ ಸ್ಟಾರ್ ಯಶ್, ನಟಿ ರಾಧಿಕಾ ಪಂಡಿತ್, ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ, ಸಚಿವರಾದ ಆರ್.ಅಶೋಕ್, ಅಶ್ವಥ್ ನಾರಾಯಣ ಸೇರಿದಂತೆ ಗಣ್ಯರು ಭಾಗಿಯಾಗಿ ಶುಭಕೋರಿದರು.
ತಿಂಗಳ ಹಿಂದೆ ಅಭಿಷೇಕ್ ಹಾಗೂ ಅವಿವಾ ಬಿದ್ದಪ್ಪ ಮದುವೆಯಾಗುತ್ತಾರೆ ಎನ್ನುವ ಸುದ್ದಿ ಹರಡಿತ್ತು. ಆದರೆ ತಾಯಿ ನಟಿ,ಸಂಸದೆ ಸುಮಲತಾ ಹಾಗೂ ನಟ ಅಭಿಷೇಕ್ ಇಬ್ಬರೂ ಈ ವಿಷಯವನ್ನು ನಿರಾಕರಿಸಿದ್ದರು. ಕುಟುಂಬಸ್ಥರು, ಆಪ್ತರಷ್ಟೆ ಭಾಗಿಯಾಗಿ, ಸರಳವಾಗಿ ನಿಶ್ಚಿತಾರ್ಥ ನೆರವೇರಿದೆ. ಅವಿವಾ ಬಿದ್ದಪ್ಪ ಹಾಗೂ ಅಭಿಷೇಕ್ ಅಂಬರೀಷ್ ಅವರು ಕೆಲ ಸಮಯದಿಂದ ಪ್ರೀತಿ ಮಾಡುತ್ತಿದ್ದು, ಸುಮಲತಾ ಅವರು ಮದುವೆ ವಿಷಯದಲ್ಲಿ ಮಗನಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡುತ್ತೇನೆ ಎಂದಿದ್ದರು. ಇದೀಗ ಯಂಗ್ ರೆಬೆಲ್ ಸ್ಟಾರ್ ಅಭಿ ಪ್ರೀತಿಸಿದ ಹುಡುಗಿಯ ಕೈ ಹಿಡಿಯುತ್ತಿದ್ದಾರೆ.
ಅವಿವಾ ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ ಅವರ ಮಗಳು. 'ಅಲೆ’ ಚಲನಚಿತ್ರದ ಮುಖಾಂತರ ಅವಿವಾ ಕೂಡಾ ಚಂದನವನದಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಿದ್ದರು. ಆದರೆ ಇವರು ಸಿನಿಮಾಗಿಂತಲೂ ಮಾಡೆಲಿಂಗ್ ಕ್ಷೇತ್ರದಲ್ಲೇ ಹೆಚ್ಚು ಫೇಮಸ್ ಆಗಿದ್ದಾರೆ. 'ಅಮರ್' ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದ ಅಭಿಷೇಕ್ ಸದ್ಯ 'ಬ್ಯಾಡ್ ಮ್ಯಾನರ್ಸ್' ಚಿತ್ರೀಕರಣ ಪೂರ್ಣಗೊಳಿಸಿ, 'ಕಾಳಿ' ಚಿತ್ರದ ಶೂಟಿಂಗ್ನಲ್ಲಿ ಬ್ಯುಸೀ ಆಗಿದ್ದಾರೆ.