ಮಂಗಳೂರು: ವಕೀಲನ ಮೇಲೆ ದೌರ್ಜನ್ಯ ಎಸಗಿದ್ದ ಪೊಲೀಸ್ ಅಧಿಕಾರಿ ಅಮಾನತು
Sunday, December 11, 2022
ಮಂಗಳೂರು: ಯುವ ವಕೀಲ ಕುಲದೀಪ್ ಮೇಲೆ ದೌರ್ಜನ್ಯ ಎಸಗಿರುವ ಪುಂಜಾಲಕಟ್ಟೆ ಪೊಲೀಸ್ ಅಧಿಕಾರಿ ಸುತೇಶ್ ರನ್ನು ಡಿಜಿಪಿ ಪ್ರವೀಣ್ ಸೂದ್ ಅವರು ಅಮಾನತು ಮಾಡಿ ಆದೇಶಿಸಿದ್ದಾರೆ.
ನ್ಯಾಯವಾದಿ ಕುಲದೀಪ್ ಮೇಲಿನ ದೌರ್ಜನ್ಯವನ್ನು ಖಂಡಿಸಿ ವಕೀಲರ ಸಂಘ ಕ್ರಮಕ್ಕೆ ಆಗ್ರಹಿಸಿ ಮುಖ್ಯಮಂತ್ರಿ ಮಂಗಳೂರು ಭೇಟಿಯ ವೇಳೆ ವಿಮಾನ ನಿಲ್ದಾಣದಲ್ಲಿ ಮನವಿ ಸಲ್ಲಿಸಿತ್ತು. ಈ ಮನವಿಯನ್ನು ಪರಿಗಣಿಸಿದ ಸಿ ಎಂ ಬಸವರಾಜ ಬೊಮ್ಮಾಯಿಯವರು ಐಜಿಪಿಯವರಿಗೆ ತಕ್ಷಣ ಪೊಲೀಸ್ ಅಧಿಕಾರಿಯ ಮೇಲೆ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಡಿಜಿಪಿ ಪ್ರವೀಣ್ ಸೂದ್ ಅವರು ಸುತೇಶ್ ರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಮಾಡುವಂತೆ ಆದೇಶಿಸಿದ್ದಾರೆ.
ಯುವ ವಕೀಲ ಕುಲದೀಪ್ ಮೇಲಿನ ಪೊಲೀಸ್ ದೌರ್ಜನ್ಯ ಖಂಡಿಸಿ ಪುಂಜಾಲಕಟ್ಟೆ ಠಾಣಾ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡುವಂತೆ ದಕ್ಷಣ ಕನ್ನಡ ಜಿಲ್ಲೆಯ ವಕೀಲರು ಪ್ರತಿಭಟನೆ ನಡೆಸಿದ್ದರು. ಆದರೆ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡದೆ ದ.ಕ.ಜಿಲ್ಲಾ ಪೋಲಿಸ್ ಅಧೀಕ್ಷರ ಕಚೇರಿಗೆ ವರ್ಗಾವಣೆ ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ಮಂಗಳೂರು ವಕೀಲರ ಸಂಘ ನಾಳೆ ಎಸ್ಪಿ ಕಚೇರಿಯವರೆಗೆ ಜಾಥಾ ನಡೆಸಬೇಕೆಂದು ಉದ್ದೇಶಿಸಿತ್ತು. ಆದರೆ ಇದೀಗ ಐಜಿಪಿಯವರ ಅಮಾನತು ಮಾಡಿ ಕ್ರಮ ವಹಿಸಿರುವುದರಿಂದ ಪ್ರತಿಭಟನಾ ಜಾಥಾ ಹಿಂಪಡೆದಿದೆ.