ಶೀಘ್ರದಲ್ಲೇ ತಯಾರಾಗಲಿದ್ಯಾ ಕಾಂತಾರ ಚಿತ್ರದ ಎರಡನೇ ಭಾಗ ?ನಿರ್ದೇಶಕ ರಿಷಬ್ ಶೆಟ್ಟಿ ಪಂಜುರ್ಲಿ ದೈವದ ಅಪ್ಪಣೆ ಕೇಳಿದ್ದು ಹೌದಾ!ಧರ್ಮಸ್ಥಳ ಮಂಜುನಾಥನೇ ಅಪ್ಪಣೆ ಕೊಡಬೇಕಂತೆ ಕಾಂತಾರ ಸಿನಿಮಾಕ್ಕೆ...ಈ ಬಗೆಗೆ ಒಂದು ಸುದ್ದಿ
Monday, December 12, 2022
ದೇಶ ವಿದೇಶದಲ್ಲಿ ಸದ್ದು ಮಾಡಿರುವ ಕಾಂತಾರ ಸಿನಿಮಾ ಎರಡನೇ ಭಾಗ ಬರುತ್ತಾ ಎನ್ನುವ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಈಗಾಗಲೇ ಚಿತ್ರತಂಡ ಮತ್ತೊಂದು ಕಾಂತಾರ ಚಿತ್ರ ತಯಾರಿಸೋಕೆ ರೆಡಿ ಆಗಿದೆ ಅನ್ನೋ ವದಂತಿ ಹರಡಿದ್ದರೂ, ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ ಇದು ಬರೀ ವದಂತಿಯಲ್ಲ, ಆ ಕುರಿತು ಚಿತ್ರತಂಡ ಪಂಜುರ್ಲಿ ದೈವದ ಅಪ್ಪಣೆ ಕೇಳಿದೆ ಅನ್ನುವುದಕ್ಕೆ ಸಾಕ್ಷ್ಯ ಹೇಳಬಲ್ಲ ಸುದ್ದಿ ಇಲ್ಲಿದೆ.
ಮೊನ್ನೆ ಡಿಸೆಂಬರ್ 8ರಂದು ಮಂಗಳೂರಿನಲ್ಲಿ ಕಾಂತಾರ ಸಿನಿಮಾ ತಂಡ ಪಂಜುರ್ಲಿ ದೈವಕ್ಕೆ ಹರಕೆ ಕೋಲ ಕೊಟ್ಟಿದೆ ಅನ್ನುವ ಸುದ್ದಿಗೆ ಪುಷ್ಟಿ ನೀಡಬಲ್ಲ ವಿಡಿಯೋ ಹರಿದಾಡಿತ್ತು. ಆ ವಿಡಿಯೋದಲ್ಲಿ ರಿಷಬ್ ಶೆಟ್ಟಿ, ಮತ್ತವರ ಪತ್ನಿ ಸೇರಿದಂತೆ ಚಿತ್ರತಂಡದ ಕಲಾವಿದರು ಪಾಲ್ಗೊಂಡಿದ್ದು ಸ್ಪಷ್ಟವಾಗಿ ಕಂಡಿತ್ತು. ಅದೇ ಸಂದರ್ಭದಲ್ಲಿ ಪಂಜುರ್ಲಿ ದೈವದಲ್ಲಿ ರಿಷಬ್ ಶೆಟ್ಟಿ ಕಾಂತಾರ ಸಿನಿಮಾದ ಎರಡನೇ ಭಾಗದ ಚಿತ್ರೀಕರಣಕ್ಕೆ ಅನುಮತಿ ಕೇಳಿದ್ದಾರೆ ಅನ್ನುವ ವದಂತಿಯೂ ಹರಡಿತ್ತು.
ಈ ಬಗ್ಗೆ ಸ್ಪಷ್ಟನೆ ನೀಡಬೇಕಿದ್ದ ಚಿತ್ರತಂಡ ಯಾವುದೇ ಮಾಹಿತಿಯನ್ನು ನೀಡಿರಲಿಲ್ಲ. ಹಾಗಾಗಿ ಈ ರೀತಿ ಅನುಮತಿ ಕೇಳಿದ್ದು ಹೌದೋ ಅಲ್ಲವೋ ಅನ್ನುವ ಗೊಂದಲವೂ ಇತ್ತು. ಇದೀಗ ಪಂಜುರ್ಲಿ ಕೋಲದಲ್ಲಿ ಪಾತ್ರಧಾರಿಯಾಗಿದ್ದವರೇ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಆದರೆ, ದೈವದ ಚಿತ್ತ ಗೊತ್ತಿಲ್ಲ. ಭಕ್ತರು ನನಗೆ ಹೇಳಿದ್ದನ್ನು ಹೇಳುತ್ತೇನೆ. ಪಂಜುರ್ಲಿ ದೈವ, ಚಿತ್ರ ನಿರ್ಮಾಣಕ್ಕೆ ಧರ್ಮಸ್ಥಳ ಮಂಜುನಾಥನ ಅಪ್ಪಣೆಯನ್ನೇ ಪಡೆಯುವಂತೆ ತಿಳಿಸಿದ್ದಾಗಿ ಮಾಹಿತಿ ನೀಡಿದ್ದಾರೆ.
ರಿಷಬ್ ಶೆಟ್ಟಿ ಕಾಂತಾರ ಸಿನಿಮಾ ಮಾಡುವುದಕ್ಕೂ ಮೊದಲು ಸಾಕಷ್ಟು ಮುಂಜಾಗ್ರತೆ ವಹಿಸಿದ್ದರು. ಧರ್ಮಸ್ಥಳದಲ್ಲಿ ಚಿತ್ರ ನಿರ್ಮಾಣಕ್ಕೆ ಅನುಮತಿ ಕೇಳಿದ್ದರು. ಆನಂತರ, ದೈವದ ಪಾತ್ರಧಾರಿಗಳಲ್ಲಿಯೂ ಅಪ್ಪಣೆ ಕೇಳಿದ್ದರು. ದೈವದ ಪಾತ್ರಧಾರಿಗಳನ್ನು ಜೊತೆಗಿಟ್ಟುಕೊಂಡೇ ಸಿನಿಮಾದ ಸಂಪೂರ್ಣ ಚಿತ್ರೀಕರಣವನ್ನೂ ಮಾಡಿದ್ದರು. ಪಂಜುರ್ಲಿ ದೈವದ ಚಿತ್ರೀಕರಣದ ವೇಳೆ ಸಂಪೂರ್ಣ ಶುದ್ಧಾಚಾರ ಅನುಸರಿಸಿದ್ದರು. ಇದೀಗ ಸಿನಿಮಾದ ಎರಡನೇ ಭಾಗ ಮಾಡೋದಿದ್ದರೂ, ಅಂತಹದ್ದೇ ಶುದ್ಧಾಚಾರ ಪಾಲಿಸುವಂತೆ ದೈವ ನುಡಿ ಕೊಟ್ಟಿದೆ. ಅಲ್ಲದೆ, ನೂರು ಬಾರಿ ಯೋಚಿಸಿ ಮುಂದಡಿ ಇಡುವಂತೆ ಎಚ್ಚರಿಕೆಯ ಸಲಹೆ ನೀಡಿದೆಯಂತೆ.
ಕರಾವಳಿ ಭಾಗದಲ್ಲಿ ದೈವಾರಾಧನೆ ಪವಿತ್ರ, ಕಾರಣಿಕದ್ದು ಎಂದು ನಂಬುತ್ತಾರೆ. ಕಾಂತಾರ ಸಿನಿಮಾದ ಬಳಿಕವಂತೂ ತುಳುನಾಡಿನ ದೈವಗಳ ಆರಾಧನೆಯ ಚಿತ್ರಣ, ಅವುಗಳ ಮಹತ್ವ ಜಗತ್ತಿನೆತ್ತರಕ್ಕೆ ಹರಡಿದೆ. ಇದೇ ಹಿನ್ನೆಲೆಯಲ್ಲಿ ಕಾಂತಾರ ಚಿತ್ರಕ್ಕೆ ಅದ್ಭುತ ಯಶಸ್ಸು ಸಿಕ್ಕಿತ್ತು ಅನ್ನುವ ಜನರಿದ್ದಾರೆ. ಅದೇ ಸಂದರ್ಭದಲ್ಲಿ ತುಳುನಾಡಿನ ದೈವಗಳ ಆರಾಧನೆ ಹೆಸರಲ್ಲಿ ಚಿತ್ರತಂಡ ಭಾರೀ ಹಣ ಗಳಿಸಿತ್ತು ಅನ್ನುವ ಟೀಕೆಯೂ ಕೇಳಿಬಂದಿತ್ತು. ಆದರೆ ಇದ್ಯಾವುದನ್ನೂ ಲೆಕ್ಕಿಸದೆ ಚಿತ್ರತಂಡ ಕಾಂತಾರ ಸಿನಿಮಾದ ಎರಡನೇ ಭಾಗವನ್ನು ತೆರೆಗೆ ತರಲು ಮುಂದಾಗಿರುವುದು ಒಂದೆಡೆ ಕುತೂಹಲ, ಮತ್ತೊಂದೆಡೆ ಚರ್ಚೆಗೂ ಕಾರಣವಾಗಿದೆ.