ಮಂಗಳೂರು: ಹಸಿರು ವಲಯ ನಿರ್ಮಿಸದ ಎಂಆರ್ ಪಿಎಲ್ ಸಂಸ್ಥೆಯ ಮೇಲೆ ಕಠಿಣ ಕ್ರಮಕ್ಕೆ ಸರಕಾರಕ್ಕೆ ಆಗ್ರಹ
Thursday, December 22, 2022
ಮಂಗಳೂರು: ರಾಜ್ಯಸರಕಾರ 2016ರಲ್ಲಿ ಹೊರಡಿಸಿರುವ ಆರು ಅಂಶಗಳ ಪರಿಹಾರ ಕ್ರಮಗಳಲ್ಲಿ 27 ಎಕರೆ ಪ್ರದೇಶದಲ್ಲಿ ಹಸಿರುವಲಯ ನಿರ್ಮಿಸಬೇಕೆಂಬ ಆದೇಶವನ್ನು ಪಾಲಿಸದ ಎಂಆರ್ ಪಿಎಲ್ ಸಂಸ್ಥೆಯ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ಆಗ್ರಹಿಸಿದೆ.
ನಗರದ ಸ್ಟೇಟ್ ಬ್ಯಾಂಕ್ ಬಳಿಯ ವಿಕಾಸ ಕಚೇರಿಯಲ್ಲಿ ಜೋಕಟ್ಟೆ ನಾಗರಿಕ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಮಾತನಾಡಿ, ಎಂಆರ್ ಪಿಎಲ್ ಮೂರನೇ ಹಂತದ ಕೋಕ್ ಸಲ್ಫರ್ ಘಟಕದ ಮಾಲಿನ್ಯದಿಂದ ಜೋಕಟ್ಟೆ, ಕಳವಾರು, ಕೆಂಜಾರು ಪ್ರದೇಶದ ನಾಗರಿಕರು ಶಬ್ದಮಾಲಿನ್ಯ,ಅಂತರ್ಜಲ ಕಲುಷಿತ, ವಾಯುಮಾಲಿನ್ಯದಿಂದ ತತ್ತರಿಸುತ್ತಿದ್ದಾರೆ. ಇದನ್ನು ವಿರೋಧಿಸಿ ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ಎರಡು ವರ್ಷಗಳ ಕಾಲ ತೀವ್ರ ಹೋರಾಟ ನಡೆಸಿತ್ತು. ಅದರ ಫಲವಾಗಿ ರಾಜ್ಯ ಸರಕಾರ 2016ರಲ್ಲಿ ಆರು ಅಂಶಗಳ ಪರಿಹಾರ ಕ್ರಮ ಕೈಗೊಳ್ಳುವಂತೆ ಅದ್ಯಾದೇಶ ಹೊರಡಿಸಿತ್ತು. ಆದರೆ ಎಂಆರ್ ಪಿಎಲ್ 5 ಪರಿಹಾರ ಕ್ರಮಗಳನ್ನು ಅರೆಬರೆ ಪಾಲಿಸಿತ್ತು.
ಪ್ರಮುಖ ಪರಿಹಾರ ಕ್ರಮವಾದ ಅತೀ ಹೆಚ್ಚು ಹಾನಿಗೊಳಗಾದ ಪ್ರದೇಶದಲ್ಲಿ 27 ಎಕರೆ ಜಮೀನನ್ನು ವಶಪಡಿಸಿಕೊಂಡು ಅಲ್ಲಿ ಹಸಿರು ವಲಯ ನಿರ್ಮಾಣ ಮಾಡಲು ಸರಕಾರ ಸೂಚಿಸಿತ್ತು. ಅದಕ್ಕಾಗಿ ಜಮೀನು ಗುರುತಿಸಿ ಅಲ್ಲಿಂದ ಹಲವಾರು ಕುಟುಂಬವನ್ನು ಒಕ್ಕಲೆಬ್ಬಿಸಲಾಗಿತ್ತು. ಭೂಸ್ವಾಧೀನಕ್ಕಾಗಿ ಮೊದಲ ಕಂತಿನಲ್ಲಿ 180 ಕೋಟಿ ರೂ. ಹಣವನ್ನು ಡೆಪಾಸಿಟ್ ಇಡಬೇಕೆಂದು ಕೆಐಎಡಿಬಿ ನೋಟಿಸ್ ಜಾರಿ ಮಾಡಿ ವರ್ಷಗಳು ದಾಟಿದರೂ ಎಂಆರ್ ಪಿಎಲ್ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ಇಲ್ಲಿ ಅನಾರೋಗ್ಯದ ಭೀತಿ ಬೇರೆ ಕಡೆಗಳಿಗಿಂತ ಅಧಿಕವಾಗಿದೆ. ಎಂಆರ್ ಪಿಎಲ್ ತ್ಯಾಜ್ಯದಿಂದ ತೋಕೂರು ಹಳ್ಳದಲ್ಲಿ ಸಾವಿರಾರು ಟನ್ ಮೀನುಗಳ ಮಾರಣ ಹೋಮ ನಡೆದಿತ್ತು. ಫಲ್ಗುಣಿ ನದಿಯೂ ಕಲುಷಿತಗೊಳ್ಳುತ್ತಿದೆ. ಇಷ್ಟೆಲ್ಲಾ ಇದ್ದರೂ, ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಡಳಿತ ಕಣ್ಣು ಮುಚ್ಚಿ ಕುಳಿತಿದೆ. ಇದೀಗ ಮತ್ತೆ ಸರಕಾರ ಕಂಪನಿಯ ವಿಸ್ತಾರಕ್ಕೆ ಸಾವಿರಾರು ಎಕರೆ ಭೂಮಿಯನ್ನು ಪೆರ್ಮುದೆ, ಎಕ್ಕಾರು ಭಾಗದಲ್ಲಿ ಕೊಟ್ಟಿದೆ ಇದು ಎಷ್ಟು ಸರಿ. ಆದ್ದರಿಂದ ಎಂಆರ್ ಪಿಎಲ್ ಸಂಸ್ಥೆ ಆದೇಶವನ್ನು ಪಾಲಿಸಲು ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಮುನೀರ್ ಕಾಟಿಪಳ್ಳ ಆಗ್ರಹಿಸಿದರು.