ಮಂಗಳೂರು: ಶಿರಾಡಿ ಘಾಟ್ ದುರಸ್ತಿಗೆ ಮೂರು ಪ್ರಕ್ರಿಯೆಗಳ ಮಾತುಕತೆ
Saturday, December 10, 2022
ಮಂಗಳೂರು: ಶಿರಾಡಿ ಘಾಟ್ ದುರಸ್ತಿಗೆ ಮೂರು ಪ್ರಕ್ರಿಯೆಗಳ ಮಾತುಕತೆ ನಡೆಯುತ್ತಿದೆ. ತಾತ್ಕಾಲಿಕ ಡಾಂಬರೀಕರಣ, ವೈಟ್ ಟಾಪಿಂಗ್, ಸುರಂಗ ಮಾಡುವ ಪ್ರಕ್ರಿಯೆ ಮಾತುಕತೆಯಲ್ಲಿದೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಉನ್ನತ ಅಧಿಕಾರಿಗಳ ಸಭೆಯಲ್ಲಿ ನಡೆಸಿ ಸಮಗ್ರ ಚರ್ಚೆ ನಡೆಸಲಿದ್ದೇವೆ ಎಂದು ಮಂಗಳೂರಿನಲ್ಲಿಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಆರ್ ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರ ಶಾಲೆಯಲ್ಲಿ ನಡೆಯುವ ಕ್ರೀಡೋತ್ಸವ ಕಾರ್ಯಕ್ರಮ ದಲ್ಲಿ ಭಾಗವಹಿಸಲೆಂದು ಸಿಎಂ ಮಂಗಳೂರಿಗೆ ಆಗಮಿಸಿದ್ದರು. ಈ ವೇಳೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಶಿರಾಡಿ ಘಾಟ್ ರಸ್ತೆ ಅವ್ಯವಸ್ಥೆಯ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಸ್ತೆ ದುರಸ್ತಿ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಕೆಲಸಗಳು ಇನ್ನೂ ನಡೆಯುತ್ತಿಲ್ಲ. ವಾರದೊಳಗೆ ಈ ಬಗ್ಗೆ ವಿಶೇಷ ಸಭೆ ಕರೆದು ಘಾಟ್ ರಸ್ತೆ ದುರಸ್ಥಿ ಆಗದ ಕಾರಣ ತಿಳಿಯುತ್ತೇನೆ ಎಂದು ಹೇಳಿದರು.
ಮಹಾರಾಷ್ಟ್ರ-ಕರ್ನಾಟಕ ಗಡಿಬಿಕ್ಕಟ್ಟು ವಿಚಾರದ ಬಗ್ಗೆ ಮಾತನಾಡಿದ ಸಿಎಂ, ಗಡಿಯಲ್ಲಿ ಎಲ್ಲಾ ಬಸ್ ಗಳ ಓಡಾಟ ನಡೆಯುತ್ತಿದೆ. ಈ ಬಗ್ಗೆ ಮಹಾರಾಷ್ಟ್ರ ಸರ್ಕಾರಕ್ಕೆ ಹಲವು ಸೂಚನೆ ನೀಡಿದ್ದೇವೆ ಡಿ.14ರಂದು ಕೇಂದ್ರದ ಗೃಹಮಂತ್ರಿಗಳು ಎರಡು ರಾಜ್ಯದ ಸಿಎಂಗಳ ಸಭೆ ಕರೆದಿದ್ದಾರೆ. ಮುಂದಿನ ಸೋಮವಾರ ಕೇಂದ್ರಗೃಹ ಸಚಿವರನ್ನು ರಾಜ್ಯದ ಸಂಸದರು ಭೇಟಿಯಾಗಿ ಪರಿಸ್ಥಿತಿಯ ವಿವರ ನೀಡಲಿದ್ದಾರೆ. ಕರ್ನಾಟಕದ ಹಿತ ಮತ್ತು ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ಹಿತ ಕಾಯೋದು ಸರ್ಕಾರದ ಆದ್ಯತೆಯಾಗಿದೆ. ಚಳಿಗಾಲದ ಅಧಿವೇಶನದ ಸಂದರ್ಭ ಎಂಇಎಸ್ ಸಮಾವೇಶ ಮಾಡಲು ಪ್ರಯತ್ನ ಮಾಡುತ್ತಾರೆ. ಪ್ರತೀ ಬಾರಿಯೂ ಅವಕಾಶ ಕೊಡುವುದಿಲ್ಲ. ಈ ಬಾರಿಯೂ ಅವಕಾಶ ಕೊಡುವುದಿಲ್ಲ ಎಂದರು.
ಉಗ್ರರ ನಿಯಂತ್ರಣಕ್ಕೆ ರಾಜ್ಯದಲ್ಲಿ ದಿಟ್ಟ ಕ್ರಮ ಕೈಗೊಂಡಿದ್ದೇವೆ. 13 ಸ್ಲೀಪರ್ ಸೆಲ್ ಗಳನ್ನು ಗುರುತಿಸಿ ಶಂಕಿತರನ್ನು ಜೈಲಿಗೆ ಕಳುಹಿಸಿದ್ದೇವೆ. ತಮಿಳುನಾಡಿನಲ್ಲಿ ಕಾರ್ಯಾಚರಣೆ ಮಾಡಲು ಯತ್ನಿಸಿದವರನ್ನೂ ಸೆರೆ ಹಿಡಿದಿದ್ದೇವೆ. ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತದೆ. ಉಗ್ರ ಲಿಂಕ್ ಬಗ್ಗೆ ಸಮಗ್ರ ಮಾಹಿತಿ ಪಡೆದು ರಾಜ್ಯ ಮತ್ತು ಕೇಂದ್ರ ಒಟ್ಟಿಗೆ ಕೆಲಸ ಮಾಡುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.