ಮಂಗಳೂರು: ಹಿಂದೂ - ಮುಸ್ಲಿಂ ಜೋಡಿಗಳ ಮೇಲೆ ಹಿಂದೂ ಸಂಘಟನೆಯ ಕಾರ್ಯಕರ್ತರಿಂದ ದಾಳಿ
Saturday, December 10, 2022
ಮಂಗಳೂರಿನಲ್ಲಿ ಮತ್ತೆ ಹಿಂದೂ ಸಂಘಟನೆಯ ಕಾರ್ಯಕರ್ತರಿಂದ ಹಿಂದೂ - ಮುಸ್ಲಿಂ ಜೋಡಿಗಳ ಮೇಲೆ ದಾಳಿ ಮುಂದುವರಿದಿದೆ. ಮಂಗಳೂರು ನಗರದ ಕೊಟ್ಟಾರದಲ್ಲಿ ತಡರಾತ್ರಿ ವೇಳೆ ಸುತ್ತಾಡುತ್ತಿದ್ದ ಹಿಂದೂ-ಮುಸ್ಲಿಂ ಜೋಡಿಗಳ ಮೇಲೆ ಹಲ್ಲೆ ಯತ್ನ ನಡೆದಿದೆ.
ತಡರಾತ್ರಿ ಹನ್ನೆರಡು ಗಂಟೆ ಸುಮಾರಿಗೆ ಮುಸ್ಲಿಂ ಯುವಕರೊಂದಿಗೆ ಹಿಂದೂ ಯುವತಿಯರು ಸುತ್ತಾಡುತ್ತಿದ್ದಾರೆ ಎಂಬ ಮಾಹಿತಿ ಪಡೆದ ಬಜರಂಗದಳದ ಕಾರ್ಯಕರ್ತರು ಅವರನ್ನು ತಡೆದು ನಿಲ್ಲಿಸಿದ್ದರು. ಈ ವೇಳೆ ಜೋಡಿಗಳನ್ನು ಪ್ರಶ್ನಿಸಿದಾಗ ಅವರು ತಾವು ಹೊಟೇಲ್ ಗೆ ಊಟಕ್ಕೆ ಬಂದಿರುವುದಾಗಿ ಹೇಳಿದ್ದಾರೆ. ಮಧ್ಯರಾತ್ರಿ ಯಾವ ಹೊಟೇಲ್ ಇದೆ ಎಂದು ಹೇಳಿ ಹಲ್ಲೆಗೆ ಯತ್ನ ನಡೆಸಲಾಗಿದೆ.
ಉರ್ವ ಪೊಲೀಸರು ಮಧ್ಯ ಪ್ರವೇಶದ ಬಳಿಕ ಪರಿಸ್ಥಿತಿ ತಿಳಿಯಾಗಿದೆ. ಬಳಿಕ ಪೊಲೀಸ್ ಠಾಣೆಗೆ ತೆರಳಿ ಅಲ್ಲಿಂದ ಜೋಡಿಗಳು ತೆರಳಿದೆ ಎಂದು ತಿಳಿದು ಬಂದಿದೆ.