ಮಂಗಳೂರು: 4.50 ಲಕ್ಷ ಖೋಟಾ ನೋಟು ಸಾಗಾಟ ಮಾಡುತ್ತಿದ್ದ ಖದೀಮರು ಅರೆಸ್ಟ್
Tuesday, January 3, 2023
ಮಂಗಳೂರು: ನಗರದ ನಂತೂರು ಬಳಿ ದ್ವಿಚಕ್ರ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ 500 ರೂ. ಮುಖಬೆಲೆಯ 4.50 ಲಕ್ಷ ರೂ. ಖೋಟಾ ನೋಟುಗಳನ್ನು ವಶಪಡಿಸಿಕೊಂಡಿಕೊಂಡು, ಇಬ್ಬರು ಖದೀಮರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ನಿವಾಸಿ ನಿಜಾಮುದ್ದೀನ್(32), ಮಂಗಳೂರು ಜೆಪ್ಪು ನಿವಾಸಿ ರಜೀಮ್ ಅಲಿಯಾಸ್ ರಾಫಿ (31) ಬಂಧಿತರು.
ಜ.2ರಂದು ನಗರದ ಕದ್ರಿ ಠಾಣಾ ಪೊಲೀಸರು ನಂತೂರು ಬಳಿ ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ ಪೊಲೀಸರನ್ನು ಕಂಡು ಆರೋಪಿಗಳು ವಾಹನವನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾರೆ. ಪೊಲೀಸರು ಅನುಮಾನಗೊಂಡು ಬೆನ್ನಟ್ಟಿ ಅವರನ್ನು ಹಿಡಿದು ತಪಾಸಣೆ ನಡೆಸಿದ ವೇಳೆ ಅವರಲ್ಲಿ 500 ರೂ. ಮುಖಬೆಲೆಯ 4.50 ಲಕ್ಷ ರೂ. ಖೋಟಾ ನೋಟುಗಳು ಪತ್ತೆಯಾಗಿದೆ. ತಕ್ಷಣ ಪೊಲೀಸರು ಅವರನ್ನು ಬಂಧಿಸಿ ಖೋಟಾ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.
ತನಿಖೆಯ ವೇಳೆ ಇವರು ತಾವು ಬೆಂಗಳೂರಿನ ಡೇನಿಯಲ್ ಎಂಬಾತನಿಂದ ಖೋಟಾ ನೋಟುಗಳನ್ನು ಪಡೆದು ಚಲಾವಣೆ ಮಾಡಲು ಯತ್ನಿಸಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಆರೋಪಿಗಳು ಜ.2ರಂದು ಬೆಳಗ್ಗೆ ಪಾಂಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿ ಅವರ ಸ್ಕೂಟರ್ ಅನ್ನು ಸುಲಿಗೆ ಮಾಡಿದ್ದಾರೆ. ಆ ಬಳಿಕ ಅದೇ ವಾಹನದಲ್ಲಿ ಖೋಟಾ ನೋಟುಗಳ ಸಾಗಾಟಕ್ಕೆ ಬಳಸಿಕೊಂಡಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿದೆ.