ಐಸಿಸ್ ನಂಟು,ಭಯೋತ್ಪಾದನೆ ಪ್ರಕರಣ; ಎನ್‌ಐಎ ಅಧಿಕಾರಿಗಳಿಂದ ಮಂಗಳೂರು, ದಾವಣಗೆರೆಯಲ್ಲಿ ಮತ್ತಿಬ್ಬರು ಬಂಧನ, ವಿಧ್ವಂಸಕ ಕೃತ್ಯಕ್ಕೆ ಸ್ಕೆಚ್ ಹಾಕಿದ್ದ ಖದೀಮರು
Wednesday, January 11, 2023
ಮಂಗಳೂರು; ಐಸಿಸ್ ನಂಟು, ಭಯೋತ್ಪಾದನಾ ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎ ಅಧಿಕಾರಿಗಳು ಮಂಗಳೂರಿನಲ್ಲಿ ಮತ್ತೊಬ್ಬ ಶಂಕಿತ ಉಗ್ರನನ್ನು ಬಂಧಿಸಿದ್ದಾರೆ. ಮಂಗಳೂರು ಹೊರವಲಯದ ತೊಕ್ಕೊಟ್ಟಿನ ಬಬ್ಬುಕಟ್ಟೆಯ ಮಝೀನ್ ನಿವಾಸಿ ಅಬ್ದುಲ್ ರೆಹಮಾನ್ ಬಂಧಿತ.
ಇದೇ ವೇಳೆ, ದಾವಣಗೆರೆಯ ಜಿಲ್ಲೆಯ ಹೊನ್ನಾಳಿ ನಿವಾಸಿ ನದೀಮ್ ಅಹ್ಮದ್ ಎಂಬಾತನನ್ನೂ ಬಂಧಿಸಲಾಗಿದೆ. ಶಿವಮೊಗ್ಗ ಬಾಂಬ್ ಟ್ರಯಲ್ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಮಾಜ್ ಮುನೀರ್ ಮತ್ತು ಸೈಯದ್ ಯಾಸಿನ್ ಎಂಬಿಬ್ಬರು ವಿಧ್ವಂಸಕ ಕೃತ್ಯ ಎಸಗುವುದಕ್ಕಾಗಿ ಮಝೀನ್ ಅಬ್ದುಲ್ ರಹ್ಮಾನ್ ಮತ್ತು ನದೀಂ ಅಹ್ಮದ್ ಎಂಬವರನ್ನು ಬ್ರೇನ್ ವಾಷ್ ಮಾಡಿದ್ದರು. ದೇಶದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸುವುದಕ್ಕಾಗಿ ಇವರಿಬ್ಬರನ್ನು ನೇಮಿಸಿಕೊಂಡಿದ್ದರು ಎನ್ನುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಭಾರತವನ್ನು ಇಸ್ಲಾಮಿಕ್ ಸ್ಟೇಟ್ ಮಾಡುವ ಉದ್ದೇಶದಿಂದ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಯೋಜನೆ ರೂಪಿಸಿದ್ದರು. ಇವರಿಗೆ ಸಿರಿಯಾ ಮೂಲದ ಐಸಿಸ್ ಉಗ್ರರು ಫಂಡಿಂಗ್ ಮಾಡುತ್ತಿದ್ದುದು ತನಿಖೆಯಲ್ಲಿ ತಿಳಿದುಬಂದಿದೆ, ಮಾತ್ರವಲ್ಲದೆ ಐಸಿಸ್ ನೆಟ್ವರ್ಕ್ ಸೇರಲು ಆಮಿಷ ಒಡ್ಡುತ್ತಿದ್ದರು ಎನ್ನಲಾಗಿದೆ. ವಾರದ ಹಿಂದಷ್ಟೇ ಮಂಗಳೂರಿನ ಕೊಣಾಜೆಯ ಪಿಎ ಕಾಲೇಜಿನಲ್ಲಿ ಫೈನಲ್ ಇಯರ್ ಇಂಜಿನಿಯರಿಂಗ್ ಓದುತ್ತಿದ್ದ ರೆಶಾನ್ ತಾಜುದ್ದೀನ್ ಶೇಖ್ ಎಂಬಾತನನ್ನು ಬಂಧಿಸಲಾಗಿತ್ತು. ಉಡುಪಿ ಜಿಲ್ಲೆಯ ವಾರಂಬಳ್ಳಿ ನಿವಾಸಿ, ಕಾಂಗ್ರೆಸ್ ಮುಖಂಡ ತಾಜುದ್ದೀನ್ ಶೇಖ್ ಎಂಬವರ ಮಗನಾಗಿದ್ದ ರೇಶಾನ್, ಪ್ರಮುಖ ಆರೋಪಿ ಮಾಝ್ ಮುನೀರ್ ಜೊತೆಗೆ ನೇರ ಸಂಬಂಧ ಹೊಂದಿದ್ದ.