ಮಂಗಳೂರಿನಲ್ಲಿ ಮುಂದುವರೆದ ವ್ಯಾಪಾರ ಬಹಿಷ್ಕಾರ;ಕಾವೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ಯಾನರ್ ಅಳವಡಿಕೆ
Friday, January 13, 2023
ಮಂಗಳೂರು: ಹಿಂದೂ ದೇವಾಲಯಗಳ ಜಾತ್ರಾಮಹೋತ್ಸವಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರ ಬಹಿಷ್ಕಾರಕ್ಕೆ ಇನ್ನೂ ತೆರೆ ಬಿದ್ದಂತಿಲ್ಲ. ಇದೀಗ ಮಂಗಳೂರಿನ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯ ಸಂದರ್ಭದಲ್ಲಿ ಅನ್ಯಧರ್ಮೀಯರಿಗೆ ವ್ಯಾಪಾರ ಬಹಿಷ್ಕರಿಸಿರುವ ಬ್ಯಾನರ್ ಅಳವಡಿಕೆಯಾಗಿದೆ.
ಮಂಗಳೂರಿನ ಕಾವೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅನುಮತಿ ಪಡೆದುಬ್ಯಾನರ್ ಹಾಕಿದ ವಿಶ್ವ ಹಿಂದೂ ಪರಿಷತ್ತು, ಬಜರಂಗದಳ ಈ ಬ್ಯಾನರ್ ಅಳವಡಿಸಿದೆ ಎಂದು ಹೇಳಲಾಗಿದೆ. 'ಸನಾತನ ಧರ್ಮದ ಆಚರಣೆ ಹಾಗೂ ನಂಬಿಕೆಗಳಲ್ಲಿ ವಿಶ್ವಾಸವುಳ್ಳ ಹಿಂದೂ ವ್ಯಾಪಾರಿಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ. ವಿಗ್ರಹರಾಧನೆ ಹರಾಂ ಎಂದು ನಂಬಿರುವ ಯಾರಿಗೂ ಇಲ್ಲಿ ವ್ಯಾಪಾರದ ಅವಕಾಶವಿಲ್ಲ' ಎಂದು ಬ್ಯಾನರ್ ಅಳವಡಿಕೆಯಾಗಿದೆ. ಮಕರ ಸಂಕ್ರಮಣದ ದಿನವಾದ ಜ.14ರಿಂದ ಜ.18ರ ವರೆಗೆ ನಡೆಯಲಿರುವ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ನಡೆಯಲಿದೆ.
ಧಾರ್ಮಿಕ ದತ್ತಿ ವ್ಯಾಪ್ತಿಗೆ ಒಳಪಡುವ ಕಾವೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಪ್ರಾಂಗಣದ ಹೊರ ಭಾಗದಲ್ಲಿ ಸ್ಟಾಲ್ ಗಳನ್ನು ನಿರ್ಮಾಣ ಮಾಡಲಾಗಿದೆ. ದೇವಸ್ಥಾನದ ಸುತ್ತಲೂ ಹೆಚ್ಚುವರಿ ಪೊಲೀಸ್ ಭದ್ರತೆ ಮತ್ತು ಸಿಎಆರ್ ತುಕಡಿ
ವ್ಯವಸ್ಥೆ ಒದಗಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ಮುಸ್ಲಿಂ ವ್ಯಾಪಾರಿಗಳು ಇಲ್ಲಿನ ಜಾತ್ರಾ ಮಹೋತ್ಸವಗಳಲ್ಲಿ ವ್ಯಾಪಾರ ನಡೆಸುತ್ತಿದ್ದರು. ಆದರೆ ಈ ಬಾರಿ ಬಜರಂಗದಳದ ಕಾರ್ಯಕರ್ತರಿಗೆ ಸ್ಟಾಲ್ ಗಳ ನಿರ್ವಹಣೆಯ ಉಸ್ತುವಾರಿ ನೀಡಿದೆ. ದೇವಸ್ಥಾನದ ಆಡಳಿತ ಮಂಡಳಿ ಸಭೆಯಲ್ಲೇ ಹಿಂದೂಯೇತರರಿಗೆ ವ್ಯಾಪಾರ ಬಹಿಷ್ಕಾರದ ನಿರ್ಧಾರ ಮಾಡಲಾಗಿದೆ ಎಂದು ತಿಳಿದು ಬಂದಿದೆ.