ಕಾಸರಗೋಡು:ಶಾಲೆ ಬಿಟ್ಟು, ಬೀಡಿ ಕಟ್ಟುತ್ತಿದ್ದ ವ್ಯಕ್ತಿ ಈಗ ಅಮೇರಿಕಾದಲ್ಲಿ ನ್ಯಾಯಾಧೀಶ
Sunday, January 8, 2023
ಕಾಸರಗೋಡು: ಸಾಧಿಸುವ ಛಲವಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ಈ ಸ್ಟೋರಿ ಸಾಕ್ಷಿಯಾಗಿದೆ.ಬೀಡಿ ಕಟ್ಟಿ ಜೀವನ ನಡೆಸುತ್ತಿದ್ದ ವ್ಯಕ್ತಿ ಅಮೇರಿಕಾದಲ್ಲಿ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.
ಅಮೇರಿಕಾದ ಟೆಕ್ಸಾಸ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದ ವಕೀಲ ಸುರೇಂದ್ರನ್ ಕೆ ಪಟ್ಟೆಲ್ ಅಮೇರಿಕಾದ ಫೋರ್ಟ್ ಬೆಂಡ್ ಕೌಂಟಿ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕವಾಗಿದ್ದಾರೆ.
ಕೇರಳದ ಕಾಸರಗೋಡಿನಲ್ಲಿ ಕೂಲಿ ಕಾರ್ಮಿಕ ದಂಪತಿಗೆ ಸುರೇಂದ್ರನ್ ಜನಿಸಿದರು. ಶಾಲೆ, ಕಾಲೇಜು ದಿನಗಳಲ್ಲಿ ಪೋಷಕರಿಗೆ ಹೊರೆಯಾಗಬಾರದು ಎಂಬ ಕಾರಣಕ್ಕೆ ಸುರೇಂದ್ರನ್ ಬಿಡಿ ಕಟ್ಟುವ ಕಾಯಕ ಮಾಡುತ್ತಿದ್ದರು.
'ಬಡತನದ ಕಾರಣ 10ನೇ ತರಗತಿ ಬಳಿಕ ಶಿಕ್ಷಣವನ್ನು ಮುಂದುವರೆಸಲು ಸಾಧ್ಯವಾಗದ ಕಾರಣ ಒಂದು ವರ್ಷ ಬೀಡಿ ಕಟ್ಟುವ ಕೆಲಸವನ್ನು ಮುಂದುವರೆಸಿದೆ. ಈ ಕಷ್ಟದ ದಿನಗಳಲ್ಲಿ ನಾನು ಏನಾದರು ಸಾಧಿಸಬೇಕು ಎಂಬ ಛಲ ನನ್ನ ಮನದಲ್ಲಿ ಮೂಡಿತು. ಮುಂದೆ ಮನೆಯಲ್ಲಿ ಓದುವುದಾಗಿ ಹೇಳಿ ಕಾಲೇಜಿಗೆ ಸೇರಿದೆ' ಎಂದು ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಸುರೇಂದ್ರನ್ ಹೇಳಿದ್ದಾರೆ.
ಕಾಲೇಜು ಶಿಕ್ಷಣದಲ್ಲೂ ಆರ್ಥಿಕ ಸಂಕಷ್ಟದಿಂದಾಗಿ ತೊಂದರೆ ಅನುಭವಿಸಿದ್ದರು. 1995ರಲ್ಲಿ ಕಾನೂನು ಪದವಿ ಪಡೆದು ಅಡ್ವೊಕೇಟ್ ವೃತ್ತಿ ಆರಂಭಿಸಿದರು. ನಂತರ ಸುಪ್ರೀಂ ಕೋರ್ಟ್‌ನಲ್ಲೂ ವಕೀಲರಾಗಿ ಕೆಲಸ ಮಾಡಿದರು.
ಸುರೇಂದ್ರನ್ ಹೆಂಡತಿ ನರ್ಸ್ ಆಗಿದ್ದರು. 2007ರಲ್ಲಿ ಅವರ ಕುಟುಂಬಕ್ಕೆ ಅಮೆರಿಕ ಹೋಗುವ ಅವಕಾಶ ದೊರೆಯಿತು. ಅಲ್ಲಿಗೆ ಹೋದ ಬಳಿಕ ಟೆಕ್ಸಾಸ್ ಬಾರ್ ಎಕ್ಸಾಂ ತೆಗೆದುಕೊಂಡರು.
ಅಮೇರಿಕಾದ ಕೆಲ ಶಾಪಿಂಗ್ ಮಾಲ್ ಗಳಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡು ಓದಿದ ಅವರು ಬಾರ್ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದರು. ಅತಿ ಹೆಚ್ಚು ಅಂಕಗಳನ್ನು ಪಡೆಯುವ ಮೂಲಕ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾದರು.
ನಂತರ ಟೆಕ್ಸಾಸ್ ಕೋರ್ಟ್ ನಲ್ಲಿ ಕೆಲಸಕ್ಕೆ ಸೇರಿದರು. ಜನವರಿ 1ರಂದು ಇಲ್ಲಿನ ಕೌಂಟಿ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ.