ಮಂಗಳೂರು: ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಪ್ರಧಾನಿ ಬೆಂಗಾವಲಾಗಿ ಮಂಗಳೂರಿನ ಕಾರ್ತಿಕ್ ಕಶ್ಯಪ್
Thursday, January 26, 2023
ಮಂಗಳೂರು: ದೇಶದ ಗಣರಾಜ್ಯೋತ್ಸವ ಪೆರೇಡ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬೆಂಗಾವಲು ಅಧಿಕಾರಿಯಾಗಿ ಮಂಗಳೂರಿನ ಕಾರ್ತಿಕ್ ಕಶ್ಯಪ್ ಕರ್ತವ್ಯ ನಿರ್ವಹಿಸಿದ್ದಾರೆ.
ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಯಾಗಿರುವ ಕಾರ್ತಿಕ್ ಕಶ್ಯಪ್ ಅವರು 74ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರಿಗೆ ಭದ್ರತಾ ಕರ್ತವ್ಯದಲ್ಲಿದ್ದರು. ಕಪ್ಪು ಕನ್ನಡಕ, ಟೈ - ಕೋಟ್ ಗಳನ್ನು ಧರಿಸಿ ಟಿಪ್ ಟಾಪ್ ಆಗಿ ವೇದಿಕೆಯಲ್ಲಿದ್ದ ಇವರು ಮಂಗಳೂರು ಮಾಜಿ ಶಂಕರ್ ಭಟ್ ಪುತ್ರ. ಇವರು ನಗರದ ಚಿನ್ಮಯ್ ಶಾಲೆ, ಸಂತ ಅಲೋಶಿಯಸ್ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿ ನಿಟ್ಟೆ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದರು. ಬಳಿಕ ಯುಪಿಎಸ್ ಸಿ ತರಬೇತಿಗೆ ದಿಲ್ಲಿಗೆ ತೆರಳಿದ್ದರು.
ತಮ್ಮ 23ನೇ ವಯಸ್ಸಿಗೆ ಯುಪಿಎಸ್ ಸಿ ಪರೀಕ್ಷೆಯನ್ನು ಮೊದಲೇ ಪ್ರಯತ್ನದಲ್ಲೇ ಯಶಸ್ಸು ಕಂಡವರು. ಐಎಎಸ್ ಪದವಿ ಪಡೆಯುವ ಅವಕಾಶವಿದ್ದರೂ ಐಪಿಎಸ್ ನಲ್ಲಿ ಸೇವೆಗೆ ಸೇರಿದರು. ಐಪಿಎಸ್ ಅವಧಿಯಲ್ಲಿಯೇ ಬೆಸ್ಟ್ ಸ್ಟೂಡೆಂಟ್ ಪ್ರಶಸ್ತಿ ಪಡೆದಿದ್ದರು. ಬಳಿಕ ಐಪಿಎಸ್ ನಲ್ಲಿ ಗುಜರಾತ್ ಕೆಡರ್ ತೆಗೆದುಕೊಂಡು ಅಲ್ಲಿ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ಯುಪಿಎಸ್ ಸಿನಲ್ಲಿ ತಮ್ಮ ಬ್ಯಾಚ್ ಮೇಟ್ ಆಗಿರುವ ಪ್ರಿಯಾಂಕಾ ಕಶ್ಯಪ್ ಅವರನ್ನು ವಿವಾಹವಾಗಿರುವ ಇವರು, ತಮ್ಮ ಸೇವಾ ವ್ಯಾಪ್ತಿಯನ್ನು ಕೇಂದ್ರಾಡಳಿತ ಪ್ರದೇಶಕ್ಕೆ ಬದಲಾಯಿಸಿಕೊಂಡರು. ಅಲ್ಲಿ ಜೊತೆಯಾಗಿ ಈ ದಂಪತಿ ಸೇವೆ ಸಲ್ಲಿಸಿದ್ದರು. ಗೋವಾದಲ್ಲಿ ಆರು ವರ್ಷಗಳ ಕಾಲ ಎಸ್ಪಿಯಾಗಿ ಸೇವೆ ಸಲ್ಲಿದ್ದರು.