Mangalore: ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 150ಕ್ಕೂ ಅಧಿಕ ಸ್ಥಾನದಲ್ಲಿ ಗೆಲುವು; ನಳೀನ್ ಕುಮಾರ್ ಕಟೀಲ್ ಭವಿಷ್ಯ
Monday, January 2, 2023
ಮಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನದಲ್ಲಿ ಗೆಲುವು ಸಾಧಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಭವಿಷ್ಯ ನುಡಿದರು.
ನಗರದ ಟಿ.ವಿ.ರಮಣ ಪೈ ಸಭಾಂಗಣದಲ್ಲಿ 'ಬೂತ್ ವಿಜಯ ಅಭಿಯಾನ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಟೀಲ್, ಇಡೀ ರಾಜ್ಯದಲ್ಲಿ ಬಿಜೆಪಿ ಸರ್ವವ್ಯಾಪಿ, ಸರ್ವಸ್ಪರ್ಶಿಯಾಗಿ ಬೆಳೆದಿದೆ. ದೇಶದಲ್ಲಿ ಪರಿವರ್ತನೆ ಕಾಣಬೇಕಾದರೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕಾಗಿದೆ. ಆದ್ದರಿಂದ 'ಬೂತ್ ವಿಜಯ ಅಭಿಯಾನ', 'ವಿಜಯೀ ಸಂಕಲ್ಪ ಅಭಿಯಾನ'ದ ಮೂಲಕ ಅಧಿಕಾರವನ್ನು ಹಿಡಿಯಬೇಕಿದೆ ಎಂದರು.
ಜ.2-12ರವರೆಗೆ ಬೂತ್ ವಿಜಯ ಅಭಿಯಾನ ನಡೆಯಲಿದೆ. ಈ 10ದಿನಗಳಲ್ಲಿ ಬೂತ್ ಕಮಿಟಿ ಬಲಪಡಿಸುವ, ಪೇಜ್ ಪ್ರಮುಖ್ ಸರಿಪಡಿಸುವ, ವಾಟ್ಸ್ಆ್ಯಪ್ ಗ್ರೂಪ್ ರಚಿಸುವ, ಒಂದು ಬೂತ್ ನಲ್ಲಿ ಕನಿಷ್ಠ 25ಮನೆಗಳಲ್ಲಿ ಬಿಜೆಪಿ ಧ್ವಜ ಹಾರಿಸುವ ಕಾರ್ಯ ನಡೆಯುತ್ತದೆ. ಆ ಬಳಿಕ 'ವಿಜಯೀ ಸಂಕಲ್ಪ ಅಭಿಯಾನ'ವು ಜ.21-29ರವರೆಗೆ ನಡೆಯಲಿದೆ. ಈ ಸಂದರ್ಭ ಮನೆಮನೆಗಳಲ್ಲಿ ಬಿಜೆಪಿಯ ಯೋಜನೆಗಳ ಪ್ರಚಾರ, 'ನಮ್ಮ ಮನೆ ಬಿಜೆಪಿ ಮನೆ' ಸ್ಟಿಕ್ಕರ್ ಅಭಿಯಾನ, ಪ್ರತೀ ಬೂತ್ ಗಳಲ್ಲಿ ಗೋಡೆ ಬರಹ, ಸದಸ್ಯತನ ಅಭಿಯಾನ, ಪ್ರತೀ ಬೂತ್ ಗಳಲ್ಲಿ ಫಲಾನುಭವಿಗಳ ಸಂಪರ್ಕ ಮಾಡುವ ಮೂಲಕ ಬಿಜೆಪಿಯನ್ನು ವಿಧಾನಸಭೆಯನ್ನು ಗೆಲ್ಲಿಸುವ ಕಾರ್ಯ ಮಾಡಬೇಕೆಂದು ಕಾರ್ಯಕರ್ತರಿಗೆ ಸೂಚನೆ ನೀಡಿದರು.
Video