ವಿಧಾನಸಭಾ ಚುನಾವಣೆಯೊಳಗಡೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೈಲಿಗೆ
Monday, January 2, 2023
ಮಂಗಳೂರು: ಮುಂದಿನ ವಿಧಾನಸಭಾ ಚುನಾವಣೆಯೊಳಗಡೆ ಮಾಜಿ ಸಿಎಂ ಸಿದ್ದರಾಮಯ್ಯ ಜೈಲಿಗೆ ಹೋಗಲಿದ್ದಾರೆ. ಅವರ ಎಲ್ಲಾ ಹಗರಣಗಳನ್ನು ನಾವು ಬಯಲು ಮಾಡುಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸರಕಾರದ ಮೇಲೆ 40% ಕಮಿಷನ್ ಆರೋಪ ಮಾಡಿದ ಕಾಂಗ್ರೆಸ್ ಮೇಲೆ ಹರಿಹಾಯ್ದ ಅವರು, ಕಾಂಗ್ರೆಸ್ 100% ಭ್ರಷ್ಟಾಚಾರಿಗಳ ಪಕ್ಷ. ಕಾಂಗ್ರೆಸ್ ಭ್ರಷ್ಟಾಚಾರಿಗಳ ಪಕ್ಷ, ಭ್ರಷ್ಟಾಚಾರದ ಪಿತಾಮಹ, ಭ್ರಷ್ಟಾಚಾರಿಗಳಲ್ಲಿ ಮಹಾಭ್ರಷ್ಟಾಚಾರಿಗಳು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಎಂದು ನೇರವಾಗಿ ಆರೋಪಿಸಿದರು.
ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ಈ ಬಗ್ಗೆ ಯಾಕೆ ಚರ್ಚೆ ಮಾಡಿಲ್ಲ. ಭ್ರಷ್ಟಾಚಾರದ ದಾಖಲೆಗಳಿದ್ದಲ್ಲಿ ಲೋಕಾಯುಕ್ತಕ್ಕೆ ಪ್ರಕರಣ ದಾಖಲಿಸಬಹುದು. ಒಂದು ವೇಳೆ ದೃಢವಾದಲ್ಲಿ ಎಷ್ಟೇ ಪ್ರಭಾವಿ ಮಂತ್ರಿಯಿರಲಿ ಅವರನ್ನು ತೆಗೆದು ಬಿಸಾಡಿ ಜೈಲಿಗಟ್ಟುತ್ತೇವೆ. ಬಿಜೆಪಿ ಪಾರದರ್ಶಕವಾಗಿರುವುದರಿಂದ ನಮ್ಮ ಯಾರ ಮೇಲೂ ಕೇಸು ದಾಖಲಿಸಲು ಸಾಧ್ಯವಾಗಿಲ್ಲ ಎಂದರು.
ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ, ಡಿಕೆಶಿ, ಮಲ್ಲಿಕಾರ್ಜುನ ಖರ್ಗೆ ನಡುವೆ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ಆರಂಭವಾಗಿದೆ. ದ.ಕ.ಜಿಲ್ಲೆಯಲ್ಲಿ ಯು.ಟಿ.ಖಾದರ್, ರಮಾನಾಥ ರೈ, ಜೆ.ಆರ್.ಲೋಬೊ ನಡುವೆ ಮಂತ್ರಿ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದೆ. ಮುಂದಿನ ಚುನಾವಣೆಯಲ್ಲಿ ದ.ಕ.ಜಿಲ್ಲೆಯಲ್ಲಿ ಕಾಂಗ್ರೆಸ್ ನಲ್ಲಿ ಬೂತ್ ಕೆಲಸ ಮಾಡಲು ಒಬ್ಬ ಹಿಂದೂ ಸಿಗೋಲ್ಲ. ಆದ್ದರಿಂದ ಮುಂದಿನ 15 ವರ್ಷಗಳ ಕಾಲ ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರದಲ್ಲಿರುತ್ತದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಟೂ ಸ್ಥಾನದಲ್ಲೂ ಬಿಜೆಪಿ ವಿಜಯ ಸಾಧಿಸಲಿದೆ. ಗೋಹತ್ಯೆ, ಮತಾಂತರ ನಿಷೇಧ ಕಾನೂನುಗಳನ್ನು ಜಾರಿಗೊಳಿಸಿದ ಬಿಜೆಪಿ ಸರಕಾರ ಲವ್ ಜಿಹಾದ್ ಕಾನೂನನ್ನು ತರಲಿದೆ ಎಂದರು.
ಡಿಕೆಶಿ ರಾಜ್ಯಾಧ್ಯಕ್ಷರಾದ ಬಳಿಕ ಕಾಂಗ್ರೆಸ್ ಒಡೆದು ಮೂರು ಚೂರಾಗಿದೆ. ಆದರೆ ನಾನು ರಾಜ್ಯಾಧ್ಯಕ್ಷನಾದ ಬಳಿಕ ಬಿಜೆಪಿ ಒಂದೇ ಆಗಿದೆ. ನಾವು ಡಂಗುರ ಸಾರೋದಿಲ್ಲ. ಬಾಂಬ್, ಗರ್ನಲ್ ಸಿಡಿಸೋದಿಲ್ಲ. ಬದಲಾಗಿ ಮನೆಮನೆಗಳಿಗೆ ಹೋಗಿ ಮನಮನಗಳಲ್ಲಿ ಕಮಲವನ್ನು ಅರಳಿಸುತ್ತೇವೆ. ಆದರೆ ಕಾಂಗ್ರೆಸ್ ಒಡೆದು ಆಳುವ ನೀತಿಯ ಮೂಲಕ ಮನೆಮನೆಗಳನ್ನು ಒಡೆಯುವ ಕೆಲಸ ಮಾಡುತ್ತಿದೆ. ಈ ಮೂಲಕ ಕಾಂಗ್ರೆಸ್ಸೇ ಒಡೆದು ಹೋಗಿದೆ. ಆದರೆ ಬಿಜೆಪಿ ಒಂದಾಗಿದೆ ಎಂದು ನಳಿನ್ ಕುಮಾರ್ ಕಟೀಲು ಹೇಳಿದರು.