ಮಂಗಳೂರು: ಯಡಿಯೂರಪ್ಪನವರು 'ರಾಜಾಹುಲಿ' ಅಂದರೆ 'ಹುಲಿನಾ'.
Thursday, January 5, 2023
ಮಂಗಳೂರು: ನನಗೆ 'ಟಗರು', 'ಹುಲಿಯಾ' ಅನ್ನುತ್ತಾರೆ. ಅದು ಅಸಾಂವಿಧಾನಿಕವೇ?. ಯಡಿಯೂರಪ್ಪನವರನ್ನು ಅವರ ಪಕ್ಷದವರೇ 'ರಾಜಾಹುಲಿ' ಎಂದು ಕರೆಯುತ್ತಾರೆ. ಹಾಗಾದರೆ ಯಡಿಯೂರಪ್ಪ 'ಹುಲಿನಾ'. ನಾಯಿ ಬಹಳ ನಂಬಿಕಸ್ಥ ಪ್ರಾಣಿ. ಧೈರ್ಯ ಅನ್ನುವ ಅರ್ಥದಲ್ಲಿ ಆ ಪದ ಬಳಕೆ ಮಾಡಿದೆ ಎಂದು ಮಂಗಳೂರಿನಲ್ಲಿ ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಸಿಎಂ ಬೊಮ್ಮಾಯಿಯವರನ್ನು 'ನಾಯಿಮರಿ' ಅಂದಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾನು ಸಿಎಂ ಅವರನ್ನು ನಾಯಿ ಮರಿ ಅಂದಿಲ್ಲ. ಯಾವತ್ತೂ ಧೈರ್ಯ ಇರಬೇಕು. ರಾಜ್ಯದ ಹಿತ ಮುಖ್ಯ. ಧೈರ್ಯವಾಗಿ ಕೇಂದ್ರದೊಂದಿಗೆ ಮಾತನಾಡಿ ದುಡ್ಡು ತರಬೇಕು. ಕೇಂದ್ರದಿಂದ ಬರುವ ಅನುದಾನಗಳು ಕಡಿಮೆಯಾಗಿದೆ. ಆದ್ದರಿಂದ ಇವರು ಧೈರ್ಯವಾಗಿರಬೇಕು. ನಾಯಿಮರಿಯಂತೆ ಇರಬಾರದೆಂದು ಹೇಳಿದ್ದೆ. ಇದರಲ್ಲಿ ತಪ್ಪೇನಿದೆ?, ಇದು ಅಸಾಂವಿಧಾನಿಕವೇ? ಎಂದರು.
ನಳಿನ್ ಕುಮಾರ್ ಕಟೀಲು ಜೋಕರ್ ಇದ್ದಂತೆ. ಅವರು ಬಾಲಿಶವಾಗಿ, ಬೇಜವಾಬ್ದಾರಿಯಿಂದ ಮಾತನಾಡುತ್ತಾರೆ. ಅವರು ಒಂದು ರೀತಿ ಬಿಜೆಪಿ ಪಕ್ಷದ ವಿದೂಷಕರಿದ್ದಂತೆ. ಹಾಗಾಗಿ ಅವರ ಹೇಳಿಕೆಗಳಿಗೆ ನಾನು ಉತ್ತರ ಕೊಡುವುದಿಲ್ಲ.
ವಿಧಾನಸಭೆಯ ಚುನಾವಣೆ ಮೊದಲು ಸಿದ್ದರಾಮಯ್ಯನವರನ್ನು ಜೈಲಿಗೆ ಕಲಿಸುತ್ತೇವೆ ಎಂದ ನಳಿನ್ ಹೇಳಿಕೆಗೆ ಪ್ರತಿಕ್ರಿಯಿಸಿ, ವಿಚಾರಣೆ ಮಾಡಿ ತಪ್ಪಿತಸ್ಥರಾದಲ್ಲಿ ಜೈಲಿಗೆ ಕಲಿಸೋದು ಕೋರ್ಟ್, ಇವರಲ್ಲ. ಅದಕ್ಕೆ ಅವರು ಪೆದ್ದುಪೆದ್ದಾಗಿ ಮಾತನಾಡೋದು, ಬೇಜವಾಬ್ದಾರಿ ಹೇಳಿಕೆಗಳನ್ನು ನೀಡೋದು. ಕಾನೂನು ಗೊತ್ತಿಲ್ಲದಂತೆ ಮಾತನಾಡುವವರ ಹೇಳಿಕೆಗಳಿಗೆ ನಾನು ಉತ್ತರ ಕೊಡೋಲ್ಲ ಎಂದರು.
ಉಳ್ಳಾಲ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಬಗ್ಗೆ ಮಾತನಾಡಿದ ಅವರು, ನಾನೇನು ಅಲೆಮಾರಿ ರಾಜಕಾರಣಿಯೇ?. ಕೋಲಾರದವರು ಕರೆಯುತ್ತಾರೆ. ಬಾದಾಮಿಯವರು ಅಲ್ಲೇ ನಿಲ್ಲಿ ಎನ್ನುತ್ತಿದ್ದಾರೆ. ವರುಣಾ ಕ್ಷೇತ್ರದವರು ಇಲ್ಲೇ ನಿಲ್ಲಿ ಎಂದು ಕರೆಯುತ್ತಿದ್ದಾರೆ. ಹೈಕಮಾಂಡ್ ಎಲ್ಲಿ ಸೂಚಿಸುತ್ತದೋ ಅಲ್ಲಿ ನಾನು ಸ್ಪರ್ಧಿಸುತ್ತೇನೆ.
ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ನಿಂದ ವಿಧಾನಸಭೆಯ ಬಳಿ 10 ಲಕ್ಷ ರೂ. ಅನಧಿಕೃತ ಹಣವನ್ನು ಪೊಲೀಸರು ವಶಪಡಿಸಿಕೊಂಡ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಸರಕಾರದಲ್ಲಿ ಇಂತಹ ಬೇಕಾದಷ್ಟು ಭ್ರಷ್ಟಾಚಾರದ ಪ್ರಕರಣಗಳು ನಡೆಯುತ್ತಿದೆ. ಆದ್ದರಿಂದ ಇವರನ್ನು ಗುತ್ತಿಗೆದಾರರ ಅಸೋಸಿಯೇಷನ್ ನವರು 40% ಕಮಿಷನ್ ಸರಕಾರ ಎಂದು ಕರೆದಿದ್ದಾರೆ. ಈಶ್ವರಪ್ಪ ಲಂಚ ಕೇಳಿದರೆಂದು ಸಂತೋಷ್ ಆತ್ಮಹತ್ಯೆಗ ಮಾಡಿಕೊಂಡರು. ಮೊನ್ನೆ ಪ್ರಸಾದ್ ಎಂಬವರು ಹೀಗೆ ಹಲವಾರು ಮಂದಿ ಇವರ ಭ್ರಷ್ಟಾಚಾರದಿಂದ ಸಾವಿಗೆ ಶರಣಾಗುತ್ತಿದ್ದಾರೆ. ಈ ಸರಕಾರದಲ್ಲಿ ಭ್ರಷ್ಟಾಚಾರವಿಲ್ಲದೆ ಏನೂ ನಡೆಯೋಲ್ಲ ಎಂದು ಸಿದ್ದರಾಮಯ್ಯ ಹೇಳಿದರು.