ಮಂಗಳೂರು: ನಾರಾಯಣ ಗುರುಗಳ ತತ್ವಚಿಂತನೆಗೆ ವಿರುದ್ಧವಾದ ಪ್ರಣವಾನಂದ ಸ್ವಾಮೀಜಿ ಪಾದಯಾತ್ರೆಯನ್ನು ಬೆಂಬಲಿಸದಿರಿ;ಶ್ರೀ ನಾರಾಯಣಗುರುಗಳ ವಂಶಸ್ಥ ಸ್ವಾಮಿ ಭದ್ರಾನಂದ ಮನವಿ
Wednesday, January 4, 2023
ಮಂಗಳೂರು: ಶ್ರೀ ಪ್ರಣವಾನಂದ ಸ್ವಾಮೀಜಿಯವರು ಜ.6ರಂದು ಮಂಗಳೂರಿನಿಂದ ಬೆಂಗಳೂರಿಗೆ ಮಾಡುತ್ತಿರುವ ಪಾದಯಾತ್ರೆ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ತ್ವಚಿಂತನೆಗೆ ವಿರುದ್ಧವಾದದ್ದು. ಆದ್ದರಿಂದ ನಾರಾಯಣ ಗುರುಗಳ ತತ್ವಚಿಂತನೆಯನ್ನು ಗೌರವಿಸುವ ಯಾರೂ ಈ ಪಾದಯಾತ್ರೆಯನ್ನು ಬೆಂಬಲಿಸಬೇಡಿ ಎಂದು ಶ್ರೀ ನಾರಾಯಣಗುರುಗಳ ವಂಶಸ್ಥರಾಗಿರುವ ಸ್ವಾಮಿ ಭದ್ರಾನಂದ ಮನವಿ ಮಾಡಿದ್ದಾರೆ.
ಮದ್ಯಪಾನ, ಮದ್ಯ ಮಾರಾಟವನ್ನು ಬೆಂಬಲಿಸುವ ರೀತಿಯಲ್ಲಿ ಪ್ರಣವಾನಂದ ಸ್ವಾಮೀಜಿ ಮಾತನಾಡುತ್ತಿದ್ದಾರೆ. ನಾರಾಯಣ ಗುರುಗಳು ಮದ್ಯಪಾನದ ವಿರೋಧಿಯಾಗಿದ್ದರು. ಆದರೆ ಇವರು ಶೇಂದಿ ಇಳಿಸುವುದನ್ನು ಪ್ರೋತ್ಸಾಹಿಸುವ ಮೂಲಕ ಬಿಲ್ಲವ ಸಮುದಾಯವನ್ನು ದಾರಿತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ. ಇವರ ವಿರುದ್ಧ ಬಹಳಷ್ಟು ಪ್ರಕರಣಗಳು ದಾಖಲಾಗಿವೆ. ಸರಕಾರ ಇವರ ಮೇಲೊಂದು ಕಣ್ಣಿಡಬೇಕು ಎಂದು ಆಗ್ರಹಿಸಿದರು.
ಪ್ರಣವಾನಂದ ಸ್ವಾಮೀಜಿಗೆ ಶ್ರೀನಾರಾಯಣ ಗುರುಗಳ ಪರಂಪರೆಯ ಹಿನ್ನಲೆಯಿಲ್ಲ. ಪ್ರತೀ ವರ್ಷ 20ಮಂದಿ ಮದ್ಯಸೇವನೆಯಿಂದಲೇ ಮೃತಪಡುತ್ತಿದ್ದಾರೆ. ನಿರುದ್ಯೋಗ, ಕುಡಿಯುವ ನೀರು, ಬಡತನ, ಕೃಷಿ ಹೀಗೆ ಇನ್ನಿತರ ಸಮಸ್ಯೆಗಳನ್ನು ಮುಂದಿರಿಸಿ ಇವರಿಗೆ ಪಾದಯಾತ್ರೆ ಮಾಡಬಹುದು. ಅದೇ ರೀತಿ ಮದ್ಯಸೇವನೆ ನಿಲ್ಲಿಸಲು ಪಾದಯಾತ್ರೆ ಮಾಡಿದ್ದರೆ ಅದು ಉತ್ತಮ ಕಾರ್ಯವಾಗುತ್ತಿತ್ತು. ಆದರೆ ಪ್ರಣವಾನಂದ ಸ್ವಾಮೀಜಿ ಶೇಂದಿ ಇಳಿಸಲು ಸರಕಾರ ಅವಕಾಶ ಕೊಡಬೇಕೆಂದು ಬಿಲ್ಲವ ಸಮುದಾಯವನ್ನು ವಂಚಿಸುವುದಲ್ಲದೆ, ಕಾವಿಗೂ ಕಳಂಕ ತಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ವಾಮೀಜಿಯಾಗಿ ತಮಗೇಕೆ ಭದ್ರತಾ ಸಿಬ್ಬಂದಿ ಎಂಬ ಸುದ್ದಿಗಾರರ ಪ್ರಶ್ನೆಗೆ ಸ್ವಾಮಿ ಭದ್ರಾನಂದ ಪ್ರತಿಕ್ರಿಯಿಸಿ, ತನ್ನ ತಾತ ಬ್ರಹ್ಮಶ್ರೀ ನಾರಾಯಣ ಗುರು ಪರಂಪರೆಯವರು. ಅವರು ನಾರಾಯಣ ಗುರುಗಳ ಜೊತೆಗೆ ಇದ್ದವರು. ಆದರೆ ನಾನು ನಾರಾಯಣ ಗುರುಗಳ ತತ್ತ್ವಚಿಂತನೆಯನ್ನು ಅನುಸರಿಸುತ್ತಿರುವೆನಾದರೂ ನಾಗಸಾಧು ಪರಂಪರೆಯವನು. ನಾನು ಕೇರಳದಲ್ಲಿ ಪಿಎಫ್ಐ ಸಂಘಟನೆಯ ದೇಶವಿರೋಧಿ ಕೃತ್ಯವನ್ನು, ಡ್ರಗ್ಸ್ ಮಾಫಿಯಾವನ್ನು ಕಟುವಾಗಿ ವಿರೋಧಿಸುತ್ತಿದ್ದೇನೆ. ಸಂನ್ಯಾಸಿ ಕೇವಲ ಮಠ ಕಟ್ಟಿಕೊಂಡು ಧ್ಯಾನ, ಪ್ರವಚನ ಮಾತ್ರ ಮಾಡುವುದಲ್ಲ. ದೇಶದ ವಿಚಾರದಲ್ಲೂ ಚಿಂತನೆಯುಳ್ಳವನಾಗಬೇಕು ಎಂದು ಹೇಳಿದರು.