ಮಂಗಳೂರು : ವಿಷಾಹಾರದಿಂದ 100ಕ್ಕಿಂತ ಅಧಿಕ ವಿದ್ಯಾರ್ಥಿನಿಯರು ಅಸ್ವಸ್ಥ - ಎಫ್ಐಆರ್ ದಾಖಲು

ಮಂಗಳೂರು : ವಿಷಾಹಾರದಿಂದ 100ಕ್ಕಿಂತ ಅಧಿಕ ವಿದ್ಯಾರ್ಥಿನಿಯರು ಅಸ್ವಸ್ಥ - ಎಫ್ಐಆರ್ ದಾಖಲು


ಮಂಗಳೂರು: ನಗರದ ಹೊರವಲಯದ ಸಿಟಿ ನರ್ಸಿಂಗ್ ಕಾಲೇಜು ಹಾಸ್ಟೆಲ್‌ನ 137ಕ್ಕೂ ಅಧಿಕ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಘಟನೆಗೆ ಸಂಬಂಧಿಸಿದಂತೆ ಕಾಲೇಜು ಆಡಳಿತ ಮಂಡಳಿಯ ವಿರುದ್ಧ ಕದ್ರಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಗದೀಶ್ ಅವರು ನೀಡಿರುವ ದೂರಿನಂತೆ ಈ ಪ್ರಕರಣ ದಾಖಲಾಗಿದೆ. ಯಾವುದೋ ಸಂಶಯಾಸ್ಪದ ವಿಷಹಾರಿ ಆಹಾರವನ್ನು ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ನೀಡಲಾಗಿದೆ. ಆಹಾರ ತಯಾರಿಕೆ ಹಾಗೂ ಪೂರೈಕೆಯಲ್ಲಿ ಶುಚಿತ್ವ ಕಾಪಾಡದೆ ನಿರ್ಲಕ್ಷ್ಯ ವಹಿಸಲಾಗಿದೆ. ಆಸ್ಪತ್ರೆಗೆ ದಾಖಲಿಸುವ ಸಂದರ್ಭ ಸೂಕ್ತ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ವರದಿ ಮಾಡದೆ ಲೋಪ ಎಸಗಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಆಹಾರ ಸುರಕ್ಷಿತಾಧಿಕಾರಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ, ಪ್ರಾಂಶುಪಾಲರು, ಜಿಲ್ಲಾ ತರಬೇತಿ ಕೇಂದ್ರದ ಅಧಿಕಾರಿಗಳು ಜಂಟಿಯಾಗಿ ಹಾಸ್ಟೆಲ್ ನ ಆಹಾರ ತಯಾರಿಕಾ ಕೊಠಡಿಗೆ ಭೇಟಿ ನೀಡಿ ಕೂಲಂಕಷವಾಗಿ ಪರಿಶೀಲನೆ ನಡೆಸಿದೆ. ತಯಾರಿಸಿರುವ ಆಹಾರ ಪದಾರ್ಥಗಳು, ಕುಡಿಯುವ ನೀರು ಫ್ರಿಡ್ಜ್ ನಲ್ಲಿದ್ದ ಮಾಂಸ ಇನ್ನಿತರೆ ಆಹಾರ ವಸ್ತುಗಳನ್ನು ತಂಡ ಸಂಗ್ರಹಿಸಿ ಲ್ಯಾಬ್ ಗೆ ಕಳುಹಿಸುವ ವ್ಯವಸ್ಥೆ ಮಾಡಿದೆ. ಅಲ್ಲದೆ ತಕ್ಷಣದಿಂದ ಅಡುಗೆ ಮನೆಯಲ್ಲಿ ಯಾವುದೇ ಆಹಾರ ಪದಾರ್ಥಗಳನ್ನು ತಯಾರಿಸದಂತೆ ನಿರ್ಬಂಧ ವಿಧಿಸಿದೆ.

ಅಲ್ಲದೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪೋಷಕರು ಹಾಗೂ ಕಾಲೇಜು ಆಡಳಿತ ಮಂಡಳಿಯ ಸಭೆ ನಡೆದಿದೆ. ಈ ವೇಳೆ  ಪೋಷಕರು ಹಾಸ್ಟೆಲ್ ನ ಅವ್ಯವಸ್ಥೆ, ಸರಿಯಾದ ಆಹಾರ ನೀಡದ ಬಗ್ಗೆ ಆಕ್ರೋಶಿತರಾದರು. ಕೆಲವರು ತಮ್ಮ ಮಕ್ಕಳು ಯಾವ ಆಸ್ಪತ್ರೆಯಲ್ಲಿ ಇದ್ದಾರೆಂದು ಇನ್ನೂ ತಿಳಿದು ಬಂದಿಲ್ಲ ಎಂಬ ಗೊಂದಲದ ಬಗ್ಗೆ ಅಳಲು ತೋಡಿಕೊಂಡರು. ಬಳಿಕ ಎಸಿಪಿಯವರ ಸಮಕ್ಷಮದಲ್ಲಿ ಪೋಷಕರಿಗೆ ಸಮಾಧಾನ ತಿಳಿಸಿ ಎಲ್ಲಾ ವಿದ್ಯಾರ್ಥಿಗಳಿಗೆ ರಜೆ ನೀಡಲಾಗಿದೆ. ಆ ಬಳಿಕ ಕಾಲೇಜು ಆರಂಭದ ವಾರದ ಹಿಂದೆ ಪೋಷಕರ ಸಭೆ ನಡೆಸಿ ಎಲ್ಲಾ ಸರಿಯಾದ ಬಳಿಕವೇ ಕಾಲೇಜು, ಹಾಸ್ಟೆಲ್ ಆರಂಭವಾಗಲಿದೆ ಎಂದು ನಿರ್ಧಾರವಾಯಿತು.

Ads on article

Advertise in articles 1

advertising articles 2

Advertise under the article