ಮಂಗಳೂರು: ಚುನಾವಣೆ ವೇಳೆ ತುಳು ಭಾಷೆಯ ಅಧಿಕೃತತೆಯ ಮಾತೆತ್ತಿ ಬಿಜೆಪಿ ಸರಕಾರದಿಂದ ಮೋಸ
Monday, February 6, 2023
ಮಂಗಳೂರು: ಚುನಾವಣೆ ವೇಳೆ ತುಳುವರ ಆಕ್ರೋಶ ತಪ್ಪಿಸಲು ಬಿಜೆಪಿ ಸರಕಾರ ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡುವ ವಿಚಾರವನ್ನು ಮುಂದಿಟ್ಟುಕೊಂಡು ಮೋಸ ಮಾಡುತ್ತಿದೆ ಎಂದು ವಿಧಾನಸಭಾ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಮಾತನಾಡಿದ ಅವರು, ಬಿಜೆಪಿ ಶಾಸಕರು ಅಧಿಕಾರಕ್ಕೆ ಬಂದು 4 ವರ್ಷಗಳಾದರೂ ತುಳುವನ್ನು 2ನೇ ಅಧಿಕೃತ ರಾಜ್ಯ ಭಾಷೆಯನ್ನಾಗಿ ಮಾಡಲಿಲ್ಲ. ಸರ್ಕಾರ ಅಧ್ಯಯನ ಸಮಿತಿ ಮಾಡಿರುವುದೇ ತುಳು ಭಾಷೆಗೆ ಮಾಡಿರುವ ಅವಮಾನ. ಸಾವಿರಾರು ವರ್ಷಗಳ ಇತಿಹಾಸವಿರುವ ತುಳು ಭಾಷೆಗೆ ಅಧ್ಯಯನ ಮಾಡಿ ವರದಿ ಕೊಡುವ ಅವಶ್ಯಕತೆ ಏನಿದೆ. ಇದು ಜನರಿಗೆ ಮೋಸ ಮಾಡುವ ತಂತ್ರ ಎಂದರು.
*ಶಿರಾಡಿ ಘಾಟ್ ನಲ್ಲಿ ಟನಲ್ ಬೇಡ ಟನಲ್ ಬೇಡ, ರಸ್ತೆಗೆ ತೇಪೆಯಾದರೂ ಹಾಕಲಿ*
ಕೇಂದ್ರ ಬಜೆಟ್ ನಲ್ಲಿ ಕರಾವಳಿಗೆ ಒಂದೇ ಒಂದು ಅನುದಾನಯಿಲ್ಲ. ಶಿರಾಡಿಗೆ ಸುರಂಗ ಮಾರ್ಗ ಎಂದು ಹಲವು ವರ್ಷಗಳಿಂದ ಹೇಳುತ್ತಿದ್ದರೂ, ಯಾವುದೇ ಬಜೆಟ್ ನಲ್ಲಿ ಈ ಯೋಜನೆಗೆ ಹಣ ಇಟ್ಟಿಲ್ಲ. ರೈಲ್ವೆ ಪ್ರತ್ಯೇಕ ವಿಭಾಗ ಕೇಳಿದಾಗಲೂ ಸರ್ಕಾರದ ಸ್ಪಂದನೆಯಿಲ್ಲ. ಬಂದರು, ರಸ್ತೆಗೆ ಯಾವ ಅನುದಾನವನ್ನೂ ಸರ್ಕಾರ ನೀಡಿಲ್ಲ. ಶಿರಾಡಿ ಘಾಟ್ ಬಗ್ಗೆ ಸರ್ಕಾರ ಸ್ಪಷ್ಟವಾಗಿ ಜನರಿಗೆ ಹೇಳಲಿ. ಟನಲ್ ಬೇಡ, ರಸ್ತೆಗೆ ತೇಪೆಯಾದರೂ ಹಾಕಲಿ. ಅದೂ ಆಗಲ್ಲ ಅಂದರೆ ನಾವು ನಮ್ಮ ಅನುದಾನ ಬಳಸಿ ತೇಪೆ ಕಾರ್ಯ ಮಾಡುತ್ತೇವೆ ಎಂದು ಹೇಳಿದರು.
*ಅಮಿತ್ ಷಾ ರೋಡ್ ಶೋ ವೇಳೆ ರಸ್ತೆಯ ಹೊಂಡ-ಗುಂಡಿಗಳನ್ನು ಲೆಕ್ಕ ಮಾಡಲಿ*
ಫೆ.11ರಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಮಂಗಳೂರಿನಲ್ಲಿ ರೋಡ್ ಶೋ ಮಾಡುತ್ತಿದ್ದಾರೆ. ಅವರನ್ನು ಕರಾವಳಿಗೆ ಸ್ವಾಗತ ಮಾಡುತ್ತೇವೆ. ರೋಡ್ ಶೋ ಮಾಡುವ ವೇಳೆ ಅವರು ರಸ್ತೆಯ ಹೊಂಡ-ಗುಂಡಿಗಳನ್ನು ಲೆಕ್ಕ ಮಾಡಲಿ. ಬೆಂಗಳೂರಿನಿಂದ ರಸ್ತೆ ಮಾರ್ಗದ ಮೂಲಕ ಮಂಗಳೂರಿಗೆ ಬರುವಂತೆ ಮಾಡಿದರೆ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಸೆಲ್ಯೂಟ್ ಹೊಡೆಯುತ್ತೇನೆ ಎಂದು ಯುಟಿ ಖಾದರ್ ವ್ಯಂಗ್ಯ ಮಾಡಿದರು.