ಮಂಗಳೂರು: ಲೋಕಾಯುಕ್ತಕ್ಕೆ ದೂರು ನೀಡಿದ್ದಕ್ಕೆ ಪೊಲೀಸ್ ಕಮಿಷನರ್ ನಿಂದ ಮಾನಸಿಕ ಕಿರುಕುಳ - ಆರ್ ಟಿಐ ಕಾರ್ಯಕರ್ತ ಆರೋಪ

ಮಂಗಳೂರು: ಲೋಕಾಯುಕ್ತಕ್ಕೆ ದೂರು ನೀಡಿದ್ದಕ್ಕೆ ಪೊಲೀಸ್ ಕಮಿಷನರ್ ನಿಂದ ಮಾನಸಿಕ ಕಿರುಕುಳ - ಆರ್ ಟಿಐ ಕಾರ್ಯಕರ್ತ ಆರೋಪ


ಮಂಗಳೂರು: ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಅವರು ಮಹಾ ಭ್ರಷ್ಟಾಚಾರಿ. ಅವರು ಮಂಗಳೂರಿಗೆ ಬಂದ ಬಳಿಕ ಎಲ್ಲಾ ಪೊಲೀಸ್ ಠಾಣೆಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ತಾನು ಮೂರು ಭ್ರಷ್ಟಾಚಾರ ಪ್ರಕರಣದ ವಿರುದ್ಧ ಲೋಕಾಯುಕ್ತ ಠಾಣೆಯಲ್ಲಿ ದೂರು ನೀಡಿದ್ದೆ. ಆ ಬಳಿಕದಿಂದ ಪೊಲೀಸ್ ಕಮಿಷನರ್ ನೀಡುತ್ತಿರುವ ಮಾನಸಿಕ ಕಿರುಕುಳ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಆರ್ ಟಿಐ ಕಾರ್ಯಕರ್ತ ಮಹಮ್ಮದ್ ಕಬೀರ್ ಗಂಭೀರ ಆರೋಪ ಮಾಡಿದ್ದಾರೆ.

ಭ್ರಷ್ಟಾಚಾರ ಪ್ರಕರಣದಲ್ಲಿ ಪೊಲೀಸ್ ಕಮಿಷನರ್, ಉಳ್ಳಾಲ ಠಾಣಾ ಇನ್ ಸ್ಪೆಕ್ಟರ್, ಎಸ್ಐ ವಿರುದ್ಧ ಲೋಕಾಯುಕ್ತ ಠಾಣೆಯಲ್ಲಿ ದೂರು ದಾಖಲಿಸಿರುವ ಮಹಮ್ಮದ್ ಕಬೀರ್ ಈ ಬಗ್ಗೆ ಮಾಹಿತಿ ನೀಡಿ, ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಎಲ್ಲಾ  ಠಾಣೆಗಳಿಗೂ ಹಣ ಹೋಗುತ್ತದೆ‌. ಇದಕ್ಕೆ ಬೇಕಾದ ಸಿಸಿಟಿವಿ ದಾಖಲೆಗಳನ್ನು ತೆಗೆದು ನೋಡಿದ್ದಲ್ಲಿ ಇವರ ಭ್ರಷ್ಟಾಚಾರ ಬಯಲಾಗುತ್ತದೆ. ಇದರ ಎಲ್ಲಾ ದಾಖಲೆಗಳು ನನ್ನಲ್ಲಿದೆ. ಲೋಕಾಯುಕ್ತ ಕೇಳಿದರೆ ಮಾತ್ರ ನೀಡುವೆ. ಪೊಲೀಸ್ ಕಮಿಷನರ್ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಹಣ ನೀಡಿರುವವರೇ ನನ್ನೊಂದಿಗೆ ಇದ್ದಾರೆ. ಆದರೆ ಅವರು ಯಾರೂ ಪೊಲೀಸ್ ಕಮಿಷನರ್ ಎದುರು ಬರುವುದಿಲ್ಲ. ಲೋಕಾಯುಕ್ತ ಕರೆದರೆ ಮಾತ್ರ ಬರುತ್ತಾರೆ ಎಂದು ಹೇಳಿದರು.

ನಾನು ಲೋಕಾಯುಕ್ತಕ್ಕೆ ದೂರು ನೀಡಿದ ಬಳಿಕ ಕಮಿಷನರ್, ಡಿಸಿಪಿಯವರಿಂದ ನಮ್ಮ ಮನೆಗೆ ಪದೇ ಪದೇ ಕರೆಗಳು ಬರುತ್ತಿವೆ. ಮನೆಗೆ ನೋಟಿಸ್ ಗಳು ಬರುತ್ತಿವೆ. ಪೊಲೀಸರು ಮನೆಗೆ‌ ಬಂದು ತನ್ನನ್ನು ಠಾಣೆಗೆ ಕರೆಯುತ್ತಿದ್ದಾರೆ. ಇದರಿಂದ ನನ್ನ ಪತ್ನಿ ಹಾಗೂ ಮಕ್ಕಳು ಭಯಭೀತರಾಗಿದ್ದಾರೆ. ನಾನು ಪೊಲೀಸ್ ಕಮಿಷನರ್ ಸೇರಿದಂತೆ ಮೂವರ ವಿರುದ್ಧ ಭ್ರಷ್ಟಾಚಾರದ ದೂರು ನೀಡಿದರೆ, ಪ್ರಕರಣದಲ್ಲಿ ಆರೋಪಿಯಾಗಿರುವ ಪೊಲೀಸ್ ಕಮಿಷನರ್ ಅವರ ಮೂಲಕವೇ ತನಿಖೆ ನಡೆಸಲಾಗುತ್ತದೆ. ಇದರಿಂದ ನ್ಯಾಯ ದೊರಕಲು ಎಷ್ಟರಮಟ್ಟಿಗೆ ಸಾಧ್ಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಲೋಕಾಯುಕ್ತದಿಂದ ತನಗೆ ಸರಿಯಾದ ನ್ಯಾಯ ದೊರಕದಿದ್ದಲ್ಲಿ, ಹೈಕೋರ್ಟ್ ಮೆಟ್ಟಿಲೇರುವೆ. ಭ್ರಷ್ಟಾಚಾರಿ ಪೊಲೀಸ್ ಕಮಿಷನರ್ ಮಂಗಳೂರಿನಿಂದ ಹೋಗಬೇಕು. ಅಲ್ಲದೆ ಭ್ರಷ್ಟಾಚಾರಿ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು ಎಂದು ಮಹಮ್ಮದ್ ಕಬೀರ್ ಹೇಳಿದರು.

Ads on article

Advertise in articles 1

advertising articles 2

Advertise under the article