ಮಂಗಳೂರು:ಬೆಳ್ಳಂಬೆಳಗ್ಗೆ ಕಡಬದಲ್ಲಿ ಕಾಡಾನೆ ದಾಳಿ; ಯುವತಿ ಸಹಿತ ಇಬ್ಬರು ಸ್ಥಳದಲ್ಲೇ ಸಾವು
Sunday, February 19, 2023
ಪುತ್ತೂರು, ಫೆ.20: ಕಾಡಾನೆ ದಾಳಿಗೆ ಸಿಲುಕಿ ಯುವತಿ ಸಹಿತ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಮೀನಾಡಿ ಎಂಬಲ್ಲಿ ನಡೆದಿದೆ. ರಂಜಿತಾ(21) ಮತ್ತು ರಮೇಶ್ ರೈ ನೆಲ್ಯ (55) ಮೃತಪಟ್ಟವರು.
ರಂಜಿತಾ ರೆಂಜಿಲಾಡಿ ಹಾಲು ಸೊಸೈಟಿಯಲ್ಲಿ ಉದ್ಯೋಗಿಯಾಗಿದ್ದು, ಬೆಳಗ್ಗೆ ಸೊಸೈಟಿಗೆ ತೆರಳುತ್ತಿದ್ದಾಗ ಮನೆ ಸಮೀಪದ ದಾರಿಯಲ್ಲಿದ್ದ ಕಾಡಾನೆ ಆಕೆಯ ಮೇಲೆ ದಾಳಿ ನಡೆಸಿದೆ. ರಂಜಿತಾ ಭಯದಿಂದ ಬೊಬ್ಬೆ ಹೊಡೆದಿದ್ದು ಆನೆ ತಿವಿತಕ್ಕೆ ಸಿಲುಕಿ ನೆಲಕ್ಕೆ ಬಿದ್ದಿದ್ದರು. ಇದೇ ವೇಳೆ ಸ್ಥಳೀಯರೇ ಆಗಿರುವ ರಮೇಶ್ ರೈ ಯುವತಿಯನ್ನು ರಕ್ಷಿಸಲು ಮುಂದೆ ಬಂದಿದ್ದು ಅವರ ಮೇಲೂ ಆನೆ ದಾಳಿ ನಡೆಸಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ರಮೇಶ್ ರೈ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಯುವತಿಯನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ. ಜನರು ಸೇರುತ್ತಲೇ ಆನೆ ಗುಡ್ಡದ ದಾರಿಯಲ್ಲಿ ಪರಾರಿಯಾಗಿದೆ. ಕಡಬ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಕಡಬ ಪರಿಸರದಲ್ಲಿ ಆನೆ ಆಗಿಂದಾಗ್ಗೆ ದಾಳಿ ನಡೆಸುತ್ತಿದ್ದು ಅರಣ್ಯಾಧಿಕಾರಿಗಳ ನಿರ್ಲಕ್ಷ್ಯ ಇಬ್ಬರು ಅಮಾಯಕರ ಜೀವವನ್ನು ಆಹುತಿ ತೆಗೆಯುವಂತೆ ಮಾಡಿದೆ.