ಮಂಗಳೂರು: ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್‌ಗೆ ದಿಢೀರ್ ಎದೆನೋವು
Sunday, February 19, 2023
ಮಂಗಳೂರು, ಫೆ.20 : ದೆಹಲಿಯಿಂದ ನಿನ್ನೆ ರಾತ್ರಿ ಮಂಗಳೂರಿಗೆ ಆಗಮಿಸಿದ್ದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ದಿಢೀರ್ ಎದೆನೋವು ಕಾಣಿಸಿಕೊಂಡಿದೆ. ಇದರಿಂದ ನಗರದ ಖಾಸಗಿ ಹೊಟೇಲ್ ನಲ್ಲಿ ವಾಸ್ತವ್ಯ ಇದ್ದ ಅವರನ್ನು ಬೆಳಗ್ಗೆ ಎಜೆ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಲಾಯಿತು.
ಓಶ್ಯನ್ ಪರ್ಲ್ ಆಸ್ಪತ್ರೆಯಲ್ಲಿದ್ದ ಅರುಣ್ ಸಿಂಗ್ ಅವರನ್ನು ನೇರವಾಗಿ ಎಜೆ ಆಸ್ಪತ್ರೆಗೆ ಒಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯ್ತು. ಇಸಿಜಿ ಪರೀಕ್ಷೆ ನಡೆಸಿದ ಹೃದಯ ತಜ್ಞರು, ಪರೀಕ್ಷೆಯಲ್ಲಿ ಯಾವುದೇ ತೊಂದರೆ ಇಲ್ಲವೆಂದು ಹೇಳಿದ್ದಾರೆ. ಇದರಿಂದ ನಿಟ್ಟುಸಿರು ಬಿಟ್ಟ ಅರುಣ್ ಸಿಂಗ್ ಅಲ್ಲಿಂದ 10.45ರ ವೇಳೆಗೆ ಉಡುಪಿಗೆ ರಸ್ತೆ ಮೂಲಕ ತೆರಳಿದರು.
ನಿನ್ನೆ ರಾತ್ರಿ ಅರುಣ್ ಸಿಂಗ್ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ದೆಹಲಿಯಿಂದ ಮಂಗಳೂರಿಗೆ ವಿಮಾನದಲ್ಲಿ ಆಗಮಿಸಿದ್ದರು. ರಾತ್ರಿ 10.30ರ ವೇಳೆಗೆ ಬಂದಿದ್ದ ಅವರು ಓಶ್ಯನ್ ಪರ್ಲ್ ಹೊಟೇಲಿನಲ್ಲಿ ವಾಸ್ತವ್ಯ ಇದ್ದರು. ಉಡುಪಿ ಮತ್ತು ಚಿಕ್ಕಮಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ಇರುವುದರಿಂದ ಮಂಗಳೂರಿಗೆ ಆಗಮಿಸಿದ್ದು ಇಂದು ಸಂಜೆ ಶೃಂಗೇರಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.