ಮಂಗಳೂರು : ನಾಳೆ ಕೇಂದ್ರದ ಗೃಹ ಸಚಿವ ಅಮಿತ್ ಷಾ ದ.ಕ.ಜಿಲ್ಲೆಗೆ
Friday, February 10, 2023
ಮಂಗಳೂರು: ಕೇಂದ್ರದ ಗೃಹ ಸಚಿವ ಅಮಿತ್ ಷಾ ಅವರು ಫೆ.11ರಂದು ದ.ಕ.ಜಿಲ್ಲಾ ಪ್ರವಾಸದಲ್ಲಿದ್ದಾರೆ. ಕೇರಳದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 2.15ಕ್ಕೆ ವಿಮಾನದಲ್ಲಿ ಬಂದಿಳಿಯುವ ಅವರು ಅಲ್ಲಿಂದ 2.20ರ ವೇಳೆಗೆ ಹೆಲಿಕಾಪ್ಟರ್ ನಲ್ಲಿ ಈಶ್ವರಮಂಗಲದ ಕಡೆಗೆ ಪ್ರಯಾಣಿಸಲಿದ್ದಾರೆ.
ಮಧ್ಯಾಹ್ನ 2.45ಕ್ಕೆ ಈಶ್ವರಮಂಗಲದಲ್ಲಿ ಹೆಲಿಪ್ಯಾಡ್ ನಲ್ಲಿ ಬಂದಿಳಿಯುವ ಅವರು ರಸ್ತೆ ಮಾರ್ಗದ ಮೂಲಕ ಈಶ್ವರಮಂಗಲದಲ್ಲಿರುವ ಹನುಮಗಿರಿ ದೇವಸ್ಥಾನಕ್ಕೆ ತೆರಳಲಿದ್ದಾರೆ. ಅಲ್ಲಿ ಭಾರತ ಮಾತಾ ಮಂದಿರವನ್ನು ಲೋಕಾರ್ಪಣೆ ಮಾಡಲಿದ್ದಾರೆ. 3.20ಕ್ಕೆ ಈಶ್ವರಮಂಗಲ ಹೆಲಿಪ್ಯಾಡ್ ನಲ್ಲಿ ಹೆಲಿಕಾಪ್ಟರ್ ಮೂಲಕ ಪುತ್ತೂರು ಹೆಲಿಪ್ಯಾಡ್ ಗೆ ಆಗಮಿಸಲಿದ್ದಾರೆ. ಅಲ್ಲಿಂದ ರಸ್ತೆ ಮಾರ್ಗದ ಮೂಲಕ ಪುತ್ತೂರಿನ ತೆಂಕಿಲದಲ್ಲಿರುವ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆವರಣ ತಲುಪಲಿದ್ದಾರೆ. ಅಲ್ಲಿ ಕ್ಯಾಂಪ್ಕೋದ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಲಿದ್ದಾರೆ
ಅಲ್ಲಿಂದ ಪುತ್ತೂರು ಹೆಲಿಪ್ಯಾಡ್ ಗೆ ಬಂದು ಹೆಲಿಕಾಪ್ಟರ್ ಮೂಲಕ ಸಂಜೆ 5.05ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದ್ದಾರೆ. ಬಳಿಕ 5.20ಕ್ಕೆ ಕೆಂಜಾರುವಿನಲ್ಲಿರುವ ಶ್ರೀ ದೇವಿ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಶಿಕ್ಷಣ ಸಂಸ್ಥೆಯ ಸೆಮಿನಾರ್ ಸಭಾಂಗಣದಲ್ಲಿ ಆರು ಜಿಲ್ಲೆಗಳ ಬಿಜೆಪಿ ಮುಖಂಡರ ಕೋರ್ ಕಮಿಟಿ ಸಭೆ ನಡೆಸಲಿದ್ದಾರೆ. ಆ ಬಳಿಕ ವಿಶೇಷ ವಿಮಾನದ ಮೂಲಕ ಮರಳಿ ಹೊರಡಲಿದ್ದಾರೆ.
ಈ ಬಗ್ಗೆ ಎಡಿಜಿಪಿ ಮಾಹಿತಿ ನೀಡಿ, ಕೇಂದ್ರದ ಗೃಹ ಸಚಿವ ಅಮಿತ್ ಷಾ ದ.ಕ.ಜಿಲ್ಲೆಯ ಭೇಟಿ ಹಿನ್ನೆಲೆಯಲ್ಲಿ ಮಂಗಳೂರು ಹಾಗೂ ಪುತ್ತೂರಿನಲ್ಲಿ ಪೊಲೀಸರು ಬಿಗಿ ಬಂದೋಬಸ್ತು ಮಾಡಿದ್ದಾರೆ. ಪುತ್ತೂರಿನಲ್ಲಿ 11 ಕೆಎಸ್ಆರ್ ಪಿ ಸೇರಿದಂತೆ 1000 ಮಂದಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಅಲ್ಲದೆ ವಿವಿಧ ಜಿಲ್ಲೆಗಳ ಎಸ್ಪಿ, ಡಿವೈಎಸ್ ಪಿಗಳು ಇನ್ ಸ್ಪೆಕ್ಟರ್ ಗಳನ್ನು ನಿಯೋಜನೆ ಮಾಡಲಾಗಿದೆ. ಮಂಗಳೂರಿನಲ್ಲೂ ಅಮಿತ್ ಷಾ ಅವರು ಬರುವ ಸ್ಥಳದ ಒಂದೆರಡು ಕಿ.ಮೀ. ವ್ಯಾಪ್ತಿಯಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿ ಬಿಗಿ ಪೊಲೀಸ್ ಬಂದೋಬಸ್ತು ವ್ಯವಸ್ಥೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಾವು ನೋಡುತ್ತೇವೆ ಎಂದು ಹೇಳಿದರು.